ನ್ಯೂಸ್ ನಾಟೌಟ್ : ಪೊಲೀಸ್ ಮತ್ತು ಆರೋಪಿ ನಡುವೆ ಬೀದಿಜಗಳವಾಗಿ ನಡುಬೀದಿಯಲ್ಲಿ ಹೊರಳಾಡಿರುವ ಘಟನೆ ಮಂಡ್ಯದ ನಾಗಮಂಗಲದಲ್ಲಿ ಶನಿವಾರ(ಜ.4) ನಡೆದಿದೆ.
ತಾಯಿಯೊಬ್ಬರು ಮಗನ ವಿರುದ್ಧ ಕಿರುಕುಳ ನೀಡುತ್ತಿರುವ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಆತನನ್ನು ಠಾಣೆಗೆ ಕರೆದೊಯ್ಯಲು ಬಂದ ಎ.ಎಸ್.ಐ ಜೊತೆಗೆ ಆರೋಪಿಯು ಹೊಡೆದಾಡಿಕೊಂಡಿದ್ದು, ರಸ್ತೆಯಲ್ಲಿ ಬಿದ್ದು ಹೊರಳಾಡಿದ್ದಾರೆ.
ಪಟ್ಟಣದ ಟಿ.ಬಿ.ವೃತ್ತದ ಬಳಿಯ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಆರೋಪಿ ಮಜ್ಜನಕೊಪ್ಪಲು ಪೂಜಾರಿ ಕೃಷ್ಣನನ್ನು ಅವನ ತಾಯಿ ಮರಿಯಮ್ಮ ನೀಡಿರುವ ದೂರಿನ ಮೇರೆಗೆ ವಿಚಾರಣೆ ನಡೆಸಲು ಠಾಣೆಗೆ ಕರೆದೊಯ್ಯಲು ಗ್ರಾಮಾಂತರ ಠಾಣೆಯ ಎ.ಎಸ್.ಐ ರಾಜು ಬಂದಿದ್ದಾರೆ.
ಆರೋಪಿಯು ಬರಲು ಒಪ್ಪದಿದ್ದಾಗ ಬಲವಂತವಾಗಿ ಆಟೊ ಹತ್ತಿಸಲು ಎ.ಎಸ್.ಐ ಮುಂದಾದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಆರೋಪಿ ಮತ್ತು ಪೊಲೀಸ್ ಅಧಿಕಾರಿಯು ಪರಸ್ಪರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದು, ಇಬ್ಬರ ನಡುವೆ ಮಾರಾಮಾರಿ ನಡೆದಿದೆ.
ಆರೋಪಿಯು “ದೂರು ಬಂದಿದ್ದರೆ ಎಫ್.ಐ.ಆರ್ ಹಾಕಿ ನಾನು ಠಾಣೆಗೆ ಬರುವುದಿಲ್ಲ” ಎಂದು ಎ.ಎಸ್.ಐ ಗೆ ಬೈದಿದ್ದಾನೆ ಎನ್ನಲಾಗಿದೆ.
ನಂತರ ಇಬ್ಬರು ಕೊರಳಪಟ್ಟಿ ಹಿಡಿದು ಹೊಡೆದಾಟ ನಡೆಯುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಕಾರ್ಯ ನಿರತ ಪೊಲೀಸ್ ಅಧಿಕಾರಿಯ ಮೇಲೆ ಕೈ ಮಾಡಿ ಎಳೆದಾಡಿದ ಪೂಜಾರಿ ಕೃಷ್ಣನಿಗೆ ತರಾಟೆ ತೆಗೆದುಕೊಂಡು ಜಗಳವನ್ನು ಬಿಡಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆ ಬಳಿಕ ಪೂಜಾರಿ ಕೃಷ್ಣನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
Click