ನ್ಯೂಸ್ ನಾಟೌಟ್ : ಕೆಲ ದಿನಗಳ ಹಿಂದೆಯಷ್ಟೇ ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಖಿನ್ನತೆಗೆ ಒಳಗಾಗಿ 40ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ಇದೀಗ ಅಂತಹದ್ದೇ ಪ್ರಕರಣ ಗುಜರಾತ್ ನಲ್ಲಿ ನಡೆದಿದೆ.
ಪತ್ನಿಯ ಕಿರುಕುಳದ ಬಗ್ಗೆ ವಿಡಿಯೋ ಮಾಡಿಟ್ಟು ಗುಜರಾತ್ ನ 39 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲದೇ ನನ್ನ ಪತ್ನಿಗೆ ತಕ್ಕ ಪಾಠ ಕಲಿಸಿ ಎಂದು ವಿಡಿಯೋದಲ್ಲಿ ಹೇಳಿದ್ದಾನೆಂದು ವರದಿಯಾಗಿದೆ. ವಿಡಿಯೋ ಆಧರಸಿ ಗುಜರಾತ್ ನ ಬೊಟಾಡ್ ಪೊಲೀಸರು ಮೃತನ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಡಿಸೆಂಬರ್ 30ರಂದು ಬೋಟಾಡ್ ನ ಜಮ್ರಾಲಾ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಶವ ಮನೆಯ ಚಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಮೃತನ ಕುಟುಂಬಸ್ಥರಿಗೆ ನಿನ್ನೆ(ಜ.5) ಆತನ ಮೊಬೈಲ್ ನಲ್ಲಿದ್ದ ವಿಡಿಯೋ ರೆಕಾರ್ಡಿಂಗ್ ಸಿಕ್ಕಿತ್ತು. ಈ ವಿಡಿಯೋದಲ್ಲಿ ಮೃತನು, ನನ್ನ ಸಾವಿಗೆ ಕಾರಣವಾದ ನನ್ನ ಹೆಂಡತಿಗೆ ತಕ್ಕ ಪಾಠ ಕಲಿಸಿ ಎಂದು ಹೇಳಿಕೊಂಡಿದ್ದಾನೆ. ಮಹಿಳೆ ತನ್ನ ಪತಿಗೆ ಮಾನಸಿಕ ಕಿರುಕುಳ ನೀಡಿದ್ದಾಳೆ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುವಂತೆ ಮಾಡಿರುವ ಬಗ್ಗೆಯೂ ಆತ ಹೇಳಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಎಫ್ಐಆರ್ ಪ್ರಕಾರ, ಮೃತ ವ್ಯಕ್ತಿಯು ಸಾಯುವುದಕ್ಕೂ ಮುನ್ನ ತನ್ನ ಹೆಂಡತಿಯನ್ನ ಸಮಾಧಾನಪಡಿಸಿ ಮನೆಗೆ ಕರೆದುಕೊಂಡು ಬರಲು ಹೋಗಿದ್ದನು. ಆದ್ರೆ ಆಕೆ ಬರಲು ನಿರಾಕರಿಸಿದ್ದಾಳೆ. ಬಳಿಕ ಪತಿ ವಿಡಿಯೋ ಮಾಡಿಟ್ಟು, ಆತ್ಮಹತ್ಯೆಗೆ ಮುಂದಾಗಿದ್ದಾನೆ. ವೀಡಿಯೋದಲ್ಲಿ ತನ್ನ ಹೆಂಡತಿ ಮತ್ತು ಆಕೆಯ ತಾಯಿ ಚಿತ್ರಹಿಂಸೆ ನೀಡಿರುವುದಾಗಿ ಹೇಳಿಕೊಂಡಿದ್ದಾನೆ.
ಮೃತನ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click