ನ್ಯೂಸ್ ನಾಟೌಟ್: ‘ರಾಮಾಯಣʼ ನಾಟಕದಲ್ಲಿ ರಾಕ್ಷಸನ ಪಾತ್ರ ಮಾಡಿದ ರಂಗಭೂಮಿ ಕಲಾವಿದನೊಬ್ಬ ವೇದಿಕೆಯ ಮೇಲೆ ಜೀವಂತ ಹಂದಿಯ ಹೊಟ್ಟೆಯನ್ನು ಬಗೆದು ಮಾಂಸವನ್ನು ಕಿತ್ತು ತಿಂದಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಈ ಸಂಬಂಧ 45 ವರ್ಷದ ಬಿಂಬಾಧರ ಗೌಡ ಎಂಬಾತನನ್ನು ಬಂಧಿಸಲಾಗಿದ್ದು, ಇದರ ಜತೆ ಆಯೋಜಕರಲ್ಲಿ ಒಬ್ಬರನ್ನು ಬಂಧಿಸಲಾಗಿದೆ.
ನವೆಂಬರ್ 24 ರಂದು ಹಿಂಜಿಲಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಲಾಬ್ ಗ್ರಾಮದಲ್ಲಿ ನಡೆದ ನಡೆದ ರಾಮಾಯಣ ನಾಟಕದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ವಿಡಿಯೋ ಬೆಳಕಿಗೆ ಬಂದಿದೆ.
ಕಂಜಿಯಾನಲ್ ಎಂಬ ಯಾತ್ರೆಯ ಸಂದರ್ಭದಲ್ಲಿ ಗ್ರಾಮಸ್ಥರ ಗುಂಪೊಂದು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿತು.
ನಾಟಕ ನೋಡಲು ಬಂದಿದ್ದ ಪ್ರೇಕ್ಷಕರನ್ನು ರಂಜಿಸುವ ನಿಟ್ಟಿನಲ್ಲಿ ವೇದಿಕೆಯಲ್ಲಿ ಜೀವಂತ ಹಾವು ಹಾಗೂ ಹಂದಿಯನ್ನು ಪ್ರದರ್ಶಿಸಲಾಗಿತ್ತು. ಈ ವೇಳೆ ರಾಕ್ಷಸನ ಪಾತ್ರವನ್ನು ಮಾಡುತ್ತಿದ್ದು ಕಲಾವಿದ ಜೀವಂತ ಹಂದಿಯ ಹೊಟ್ಟೆಯನ್ನು ಚಾಕುವಿನಿಂದ ಸೀಳಿ, ಹಸಿ ಮಾಂಸವನ್ನು ಪ್ರೇಕ್ಷಕರ ಮುಂದೆಯೇ ವೇದಿಕೆಯಲ್ಲಿ ಸೇವಿಸಿದ್ದಾನೆ.
ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಆಡಳಿತಾರೂಢ ಬಿಜೆಪಿ ಸದಸ್ಯರಾದ ಬಾಬು ಸಿಂಗ್ ಮತ್ತು ಸನಾತನ ಬಿಜುಲಿ ಅವರು ವಿಧಾನಸಭೆಯಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಇನ್ನೊಂದು ಕಡೆ ಪ್ರಾಣಿದಯಾ ಸಂಘದವರು ಕಲಾವಿದರ ಬಂಧನಕ್ಕೆ ಆಗ್ರಹಿಸಿದ್ದರು.