ನ್ಯೂಸ್ ನಾಟೌಟ್: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಭಾನುವಾರ(ನ.01) ಮುಂಜಾನೆ ಪೊಲೀಸರು ಹಾಗೂ ನಕ್ಸಲರ ಮಧ್ಯೆ ನಡೆದ ಎನ್ ಕೌಂಟರ್ ನಲ್ಲಿ 7 ಮಂದಿ ಮಾವೋವಾದಿಗಳನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.
ಮುಂಜಾನೆ 5:30ರ ವೇಳೆಗೆ ಚಲ್ಪಾಕ ಅರಣ್ಯದಲ್ಲಿ ನಕ್ಸಲರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ. ಗ್ರೇಹೌಂಡ್ಸ್ ಕೂಂಬಿಂಗ್ ಕಾರ್ಯಾಚರಣೆಯ ಸಮಯದಲ್ಲಿ ನಕ್ಸಲರ ಗುಂಪನ್ನು ಗುರುತಿಸಿ ಶರಣಾಗುವಂತೆ ಆದೇಶಿಸಿತ್ತು. ಈ ಸಂದರ್ಭ ನಕ್ಸಲರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಗುಂಡಿನ ಸುರಿಮಳೆ ಸುರಿಸಿದ್ದಾರೆ. ಪರಿಣಾಮ 7 ಮಂದಿ ನಕ್ಸಲರು ಹತರಾಗಿದ್ದಾರೆ.
ಘಟನಾ ಸ್ಥಳದಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಎರಡು ಎಕೆ 47 ರೈಫಲ್ಗಳು ಸೇರಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್ ಕೌಂಟರ್ನಲ್ಲಿ ಹತರಾದವರಲ್ಲಿ ಒಬ್ಬನನ್ನು ನಿಷೇಧಿತ ಸಿಪಿಐ (ಮಾವೋವಾದಿ) ತೆಲಂಗಾಣ ರಾಜ್ಯ ಸಮಿತಿಯ (ಯೆಲ್ಲಾಂಡು ನರಸಂಪೇಟ್) ಕಾರ್ಯದರ್ಶಿ ಕುರ್ಸಮ್ ಮಂಗು ಅಲಿಯಾಸ್ ಭದ್ರು ಎಂದು ಗುರುತಿಸಲಾಗಿದೆ.
ನವೆಂಬರ್ 21ರಂದು ಪೊಲೀಸ್ ಮಾಹಿತಿದಾರರೆಂದು ನಂಬಿಸಿ ಇಬ್ಬರು ಬುಡಕಟ್ಟು ಜನರನ್ನು ನಕ್ಸಲರು ಹತ್ಯೆಗೈದಿದ್ದರು. ಈ ಹಿನ್ನೆಲೆ ತೆಲಂಗಾಣ ಪೊಲೀಸ್ ಹಾಗೂ ನಕ್ಸಲ್ ವಿರೋಧಿ ಪಡೆಗಳು ಜಂಟಿಯಾಗಿ ಎಟುರ್ನಗರಂನ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ ವೇಳೆ ಈ ಘಟನೆ ನಡೆದಿದೆ.
Click