ನ್ಯೂಸ್ ನಾಟೌಟ್ : ಸಂಚಾರಿ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಬೇಡಿಕೆ ಇಡುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ. ಎನ್.ಅನುಚೇತ್ ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಇತ್ತೀಚೆಗೆ ಸೈಬರ್ ವಂಚಕರು ಸಂಚಾರ ಪೊಲೀಸರ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತ ಪಾವತಿಸುವಂತೆ ಬೇಡಿಕೆ ಇಟ್ಟು ವಂಚನೆ ಮಾಡುತ್ತಿದ್ದಾರೆ. ಈ ಕುರಿತು ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.
ಸಂಚಾರಿ ಪೊಲೀಸರೆಂದು ಸಾರ್ವಜನಿಕರಿಗೆ ಕರೆ ಮಾಡುತ್ತಿರುವ ವಂಚಕರು, ದಂಡದ ನಕಲಿ ಲಿಂಕ್ ಕಳುಹಿಸಿ ಪಾವತಿಗೆ ಒತ್ತಾಯಿಸುವುದು, ವಿಮೆ ನೀಡುವುದಾಗಿ ವಂಚನೆ, ಅಲ್ಲದೆ, ನಿಮ್ಮ ವಾಹನ ಹಿಟ್ ಆ್ಯಂಡ್ ರನ್ ಆಗಿರುವ ಬಗ್ಗೆ ಬೆದರಿಸುತ್ತಾರೆ. ಈ ಮೂಲಕ ವೈಯಕ್ತಿಕ ಮಾಹಿತಿ ದೋಚಲು ಯತ್ನಿಸಿ, ಮೊಬೈಲ್ನಲ್ಲಿ 1 ಅಥವಾ 2 ಸಂಖ್ಯೆಯನ್ನು ಒತ್ತಲು ಹೇಳಿ ವಂಚನೆ ಮಾಡುತ್ತಿದ್ದಾರೆ. ಈ ರೀತಿಯ ಕರೆಗಳನ್ನು ಪೊಲೀಸರು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
* ಅನುಮಾನಾಸ್ಪದ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಲಗತ್ತುಗಳನ್ನು ಡೌನ್ ಲೋಡ್ ಮಾಡಬೇಡಿ.
* ವೈಯಕ್ತಿಕ ಮಾಹಿತಿ ಕೊಡಬೇಡಿ ಅಥವಾ ಹಣ ಪಾವತಿ ಮಾಡದಿರಿ.
* ಸಂಚಾರಿ ಪೊಲೀಸ್ ಇಲಾಖೆಯನ್ನು ನೇರವಾಗಿ ಸಂಪರ್ಕಿಸುವ ಮೂಲಕ ಕರೆಗಳು ಅಥವಾ ಸಂದೇಶಗಳ ವಿಶ್ವಾಸಾರ್ಹತೆಯನ್ನು ದೃಢಪಡಿಸಿಕೊಳ್ಳಿ.
* ಸಂಚಾರಿ ಪೊಲೀಸ್ ಇಲಾಖೆಯ ಅಧಿಕೃತ ವೆಬ್ಸೈಟ್ ಅಥವಾ ಸಹಾಯವಾಣಿ ಸಂಖ್ಯೆಗೆ (080-22868550 /22868444) ದೂರು ದಾಖಲಿಸಿ.
* ಮಾಹಿತಿ ಒದಗಿಸುವ ಮೊದಲು ಅಧಿಕಾ ರಿಗಳ ಗುರುತುಗಳನ್ನು ಪರಿಶೀಲಿಸಿ. ದಂಡ ಅಥವಾ ಸೇವೆಗಳಿಗಾಗಿ, ದಂಡ ಪಾವತಿಗಾಗಿ ಅಧಿಕೃತ ವೆಬ್ಸೈಟ್ ಗಳನ್ನು ಬಳಸಿ.
* ಸಾಫ್ಟ್ ವೇರ್ ಮತ್ತು ಆಪರೇಟಿಂಗ್ ಸಿಸ್ಟಂಗಳನ್ನು ನವೀಕೃತವಾಗಿರಿಸಿಕೊಳ್ಳಿ.
* ಅನುಮಾನಾಸ್ಪದ ಚಟುವಟಿಕೆಗಳನ್ನು ಪೊಲೀಸರಿಗೆ ವರದಿ ಮಾಡುವ ಮೂಲಕ ಸುರಕ್ಷಿತ ಹಾಗೂ ಜಾಗರೂಕರಾಗಿರಿ.