ನ್ಯೂಸ್ ನಾಟೌಟ್: ಆಟೋರಿಕ್ಷಾದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಇಟ್ಟ ಬ್ಯಾಗ್ನಲ್ಲಿ ಬಾಂಬ್ ಇದೆ ಎಂಬ ಶಂಕೆಯಿಂದ ಆಟೋವನ್ನು ಬ್ಯಾಗ್ ಸಮೇತ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದ ಘಟನೆ ಬೆಂಗಳೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಂಬ್ ಇದೆ ಎಂದು ಆಟೋ ಚಾಲಕ ಜಯನಗರ ಪೊಲೀಸ್ ಠಾಣೆಗೆ ಬರುತ್ತಿದ್ದಂತೆ ತಕ್ಷಣ ಬಿಎಸ್ಎನ್ಎಲ್ ಟೆಲಿಪೋನ್ ಎಕ್ಸ್ಚೇಂಚ್ ಎದುರು ಇರುವ ಆಟದ ಮೈದಾನಕ್ಕೆ ಆಟೋವನ್ನು ತೆಗೆದುಕೊಂಡು ಬಂದಿದ್ದಾರೆ. ಬಳಿಕ ಬಾಂಬ್ ಸ್ಕ್ವಾಡ್ ಸಿಬ್ಬಂದಿಯಿಂದ ಪರಿಶೀಲನೆ ಮಾಡಿದಾಗ ಆಟೋದ ಹಿಂದಿನ ಸೀಟ್ನಲ್ಲಿ ಎರಡು ಚೀಲಗಳು ಪತ್ತೆಯಾಗಿವೆ. ಬ್ಯಾಗ್ ತೆರೆದು ನೋಡಿದಾಗ ಡ್ರಿಲ್ಲಿಂಗ್ ಮಷಿನ್ ಬಿಡಿ ಭಾಗಗಳು ಇದ್ದವು. ಯಾವುದೇ ರೀತಿಯ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಬೆಂಗಳೂರಿನಲ್ಲಿ ಪದೇ ಪದೆ ಹುಸಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿದ್ದವು. ಶಾಲೆ, ಹೋಟೆಲ್ ಬಳಿಕ ಕಾಲೇಜ್ಗಳಿಗೂ ಬಾಂಬ್ ಬೆದರಿಕೆ ಬಂದಿದ್ದವು. ಹೀಗಾಗಿ ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ ಪೋಷಕರು ಕೂಡ ಭಯಗೊಂಡಿದ್ದರು. ಇತ್ತೀಚೆಗೆ ನಗರದ ಬಿಎಂಎಸ್, ಎಂಎಸ್ ರಾಮಯ್ಯ ಹಾಗೂ ಬಿಐಟಿ ಇಂಜಿನಿಯರಿಂಗ್ ಕಾಲೇಜಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಇದರಿಂದ ಕಾಲೇಜು ಆವರಣಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.