ನ್ಯೂಸ್ ನಾಟೌಟ್: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ತನ್ನ ಪತಿಯನ್ನು ಸುಪಾರಿ ನೀಡಿ ಕೊಲೆ ಮಾಡಿಸಿ, ಬಳಿಕ ದೂರು ನೀಡಿ ನಾಟಕವಾಡಿದ್ದ ಪತ್ನಿ ಸೇರಿ ಐವರು ಆರೋಪಿಗಳನ್ನು ಬೆಂಗಳೂರಿನ ಬೆಳ್ಳಂದೂರು ಠಾಣೆ ಪೊಲೀಸರು ಅ.27 ರಂದು ಬಂಧಿಸಿದ್ದಾರೆ.
ಬಂಧಿತರನ್ನು ನಾಗರತ್ನ, ಆಕೆಯ ಪ್ರಿಯಕರ ರಾಮ್, ಶಶಿಕುಮಾರ್, ಸುರೇಶ್ ಹಾಗೂ ಚಿನ್ನ ಎಂದು ಗುರುತಿಸಲಾಗಿದೆ.
ಹತ್ಯೆಯಾದ ವ್ಯಕ್ತಿ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಕರೂರು ಗ್ರಾಮದ ತಿಪ್ಪೇಶ್ ಎಂದು ಪೊಲೀಸರು ತಿಳಿಸಿದ್ದಾರೆ. 10 ವರ್ಷಗಳ ಹಿಂದೆ ನಾಗರತ್ನ ಎಂಬವಳನ್ನು ಈತ ವಿವಾಹವಾಗಿದ್ದ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೂಲಿ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದ ತಿಪ್ಪೇಶ್ ದಂಪತಿ, ಬೆಳ್ಳಂದೂರು ಸಮೀಪ ನಿರ್ಮಾಣ ಹಂತದ ಕಟ್ಟಡಗಳಲ್ಲಿ ದುಡಿದು ಜೀವನ ಸಾಗಿಸುತ್ತಿದ್ದರು. ಬೋಗನಹಳ್ಳಿ ಲೇಬರ್ ಶೆಡ್ ನಲ್ಲಿ ವಾಸವಿದ್ದರು ಎನ್ನಲಾಗಿದೆ.
ಈ ನಡುವೆ ನಾಗರತ್ನ ತನ್ನ ಸಹೋದರಿಯ ಪತಿ ರಾಮ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ತಿಪ್ಪೇಶ್, ಪತ್ನಿಯೊಂದಿಗೆ ಜಗಳವಾಡಿದ್ದ. ಬಳಿಕ ರಾಮ ಮತ್ತು ನಾಗರತ್ನ ಇಬ್ಬರೂ ಸೇರಿ ತಿಪ್ಪೇಶ್ ನ ಹತ್ಯೆಗೆ ಸಂಚು ರೂಪಿಸಿದ್ದಾರೆ. ಸುರೇಶ್, ಶಶಿಕುಮಾರ್ ಹಾಗೂ ಚಿನ್ನ ಎಂಬವರನ್ನು ಸಂಪರ್ಕಿಸಿ ಹತ್ಯೆಗೆ ಸುಪಾರಿ ನೀಡಿದ್ದಾರೆ.
ಪೂರ್ವಯೋಜಿತ ಸಂಚಿನಂತೆ ಅ.14ರಂದು ಹಣ ತರುವ ನೆಪದಲ್ಲಿ ಮನೆಯಿಂದ ಪತಿ ತಿಪ್ಪೇಶ್ ನನ್ನು ನಾಗರತ್ನ ಹೊರಗೆ ಕರೆತಂದಿದ್ದು, ಬಳಿಕ ಆರೋಪಿಗಳೊಂದಿಗೆ ಸೇರಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಹತ್ಯೆ ಬಳಿಕ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿರುವ ನಾಗರತ್ನ, ತಮ್ಮ ಪತಿಯನ್ನು ಯಾರೋ ಹತ್ಯೆ ಮಾಡಿ, ಪರಾರಿಯಾಗಿದ್ದಾರೆಂದು ಆಕೆಯೇ ದೂರು ನೀಡುವ ನಾಟಕವಾಡಿದ್ದಾಳೆ.
ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್ ಸಂಖ್ಯೆಗಳ ಕರೆಗಳ ವಿವರ ಸಂಗ್ರಹಿಸಿ, ಆರೋಪಿ ನಾಗರತ್ನ ಸೇರಿದಂತೆ ಉಳಿದ ಆರೋಪಿಗಳನ್ನೂ ಬಂಧಿಸಿದ್ದಾರೆ.
Click