ನ್ಯೂಸ್ ನಾಟೌಟ್: ಕತ್ತಲಾಗುತ್ತಿದ್ದಂತೆ ಸುಳ್ಯದ ಗಾಂಧಿನಗರದಲ್ಲಿ ಕುಡುಕರ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಹೊರಗಿನಿಂದ ಈ ಊರಿಗೆ ಬಂದಿರುವ ವಲಸೆ ಕಾರ್ಮಿಕರು ಸುಳ್ಯದ ಮೇಲಿನ ಪೇಟೆಯ ಭಾಗದಲ್ಲಿ ಕುಡಿದು ತೂರಾಟ ನಡೆಸುತ್ತಿರುತ್ತಾರೆ. ಮಾತ್ರವಲ್ಲ ಒಬ್ಬರಿಗೊಬ್ಬರು ಅವಾಚ್ಯ ಶಬ್ಧಗಳಿಂದ ಬೈಯುತ್ತಾ ಇರುತ್ತಾರೆ. ಇಂತಹ ಘಟನೆಯೊಂದು ಇದೀಗ ವಿಪರೀತ ಮಟ್ಟಕ್ಕೆ ತಿರುಗಿ ಹೊಯ್ ಕೈ ವರೆಗೆ ತಲುಪಿದೆ.
ಎರಡು ದಿನಗಳ ಹಿಂದೆ ವಲಸೆ ಕಾರ್ಮಿಕರಿಬ್ಬರು ಸುಳ್ಯದ ಗಾಂಧಿನಗರದಲ್ಲಿ ಕುಡಿದು ಹೊರಗೆ ಬಂದಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಅವಾಚ್ಯ ಶಬ್ಧಗಳಿಂದ ಬೈದುಕೊಂಡಿದ್ದಾರೆ. ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. ಪೊಲೀಸರು ಬರುವುದನ್ನು ಗಮನಿಸಿದ ಗಲಾಟೆ ಮಾಡಿದ ವ್ಯಕ್ತಿ ಹೆದರಿ ಅಲ್ಲಿಯೇ ನಿಂತಿದ್ದ ಲಾರಿಯ ಟೈರ್ ಸಮೀಪದಿಂದ ನುಗ್ಗಿ ಒಳಕ್ಕೆ ಹೋಗಿ ಅಡಗಿ ಕುಳಿತಿದ್ದಾನೆ.
ಆ ಬಳಿಕ ಆತನನ್ನು ಪೊಲೀಸರು ಹೊರಗೆ ಕರೆದು ನಾಲ್ಕು ಬಿಸಿ ಮುಟ್ಟಿಸಿ ಕಳಿಸಿದ್ದಾರೆಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ಕತ್ತಲಿನ ಸಮಯದಲ್ಲಿ ಅನಾವಶ್ಯಕವಾಗಿ ಪೇಟೆಯಲ್ಲಿ ನಿಂತು ಗಲಾಟೆ ಮಾಡುವ ವ್ಯಕ್ತಿಗಳ ಬಗ್ಗೆ ಪೊಲೀಸರು ನಿಗಾವಹಿಸಿದರೆ ಮುಂಬರುವ ಹೆಚ್ಚಿನ ಅಪಾಯವನ್ನು ತಪ್ಪಿಸಬಹುದಾಗಿದೆ.
Click