ನ್ಯೂಸ್ ನಾಟೌಟ್: 13 ತಿಂಗಳ ಅವಧಿಯಲ್ಲಿ 9 ಮಹಿಳೆಯರು ನಿಗೂಢವಾಗಿ ಕೊಲೆಗೀಡಾಗಿದ್ದಾರೆ. ಎಲ್ಲರೂ ಒಂದೇ ರೀತಿಯಲ್ಲಿ ಕೊಲೆಯಾಗಿದ ಘಟನೆ ಉತ್ತರ ಪ್ರದೇಶ ರಾಜ್ಯದ ಬರೇಲಿ ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ನಡೆದಿದೆ.
ಎಲ್ಲ ಮಹಿಳೆಯರನ್ನೂ ಹಂತಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಹಿಳೆಯರ ಸೀರೆಯನ್ನೇ ಬಳಸಿ ಅವರಿಗೆ ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೀಡಾದ 9 ಮಹಿಳೆಯರ ಪೈಕಿ 8 ಮಂದಿ 40 ರಿಂದ 65 ವರ್ಷ ವಯಸ್ಸಿನ ಒಳಗಿನವರು. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಶಾಹಿ, ಶೀಶ್ಘರ್ ಹಾಗೂ ಶೇರ್ಘರ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಕೊಲೆಗಳು ನಡೆದಿವೆ. ಎಲ್ಲಾ ಪ್ರಕರಣಗಳಲ್ಲೂ ಶವಗಳು ಕಬ್ಬಿನ ಗದ್ದೆಗಳಲ್ಲೇ ಸಿಕ್ಕಿವೆ. ಶವದ ಮೇಲೆ ಬಟ್ಟೆಗಳು ಇರಲಿಲ್ಲ. ಎಲ್ಲ ಶವಗಳೂ ವಿವಸ್ತ್ರವಾಗಿದ್ದವು. ಎಂದು ವರದಿ ತಿಳಿಸಿದೆ.
ಜೊತೆಯಲ್ಲೇ ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ ಎಸಗಿರೋದು ಕಂಡುಬಂದಿದೆ. ಸರಣಿ ಕೊಲೆಗಳು ನಡೆದ ಬಳಿಕ ಒಟ್ಟು 300 ಪೊಲೀಸರ ಹೆಚ್ಚುವರಿ ಪಡೆಗೆ ಬುಲಾವ್ ನೀಡಲಾಗಿತ್ತು. ಈ ಪೊಲೀಸರನ್ನು 14 ತಂಡಗಳಾಗಿ ರಚಿಸಿ ಸಮವಸ್ತ್ರ ಸಹಿತ ಹಾಗೂ ಸಮವಸ್ತ್ರ ರಹಿತ ತಂಡಗಳನ್ನಾಗಿ ವಿಭಜಿಸಿದ್ದ ಹಿರಿಯ ಅಧಿಕಾರಿಗಳು ಉತ್ತರ ಪ್ರದೇಶದ ಬರೇಲಿ ಹಾಗೂ ಅಕ್ಕಪಕ್ಕದ ಪ್ರಾಂತ್ಯಗಳಲ್ಲಿ ಗಸ್ತು ತಿರುಗಲು ಬಿಟ್ಟಿದ್ದಾರೆ. ಇದಾದ ಬಳಿಕ ಕೆಲವು ದಿನಗಳ ಕಾಲ ಯಾವುದೇ ಕೊಲೆ ಪ್ರಕರಣಗಳು ವರದಿಯಾಗಲಿಲ್ಲ.
ಪೊಲೀಸರ ಗಸ್ತು ತೀವ್ರಗೊಂಡಿತ್ತಾದರೂ ಆಗಸ್ಟ್ ತಿಂಗಳಲ್ಲಿ ಮತ್ತೊಂದು ಮಹಿಳೆಯ ಜೀವ ಬಲಿ ಆಗಿದೆ. 45 ವರ್ಷ ವಯಸ್ಸಿನ ಅನಿತಾ ಎಂಬುವರ ಶವ ಕಬ್ಬಿನ ಗದ್ದೆಯಲ್ಲಿ ಸಿಕ್ಕಿದೆ. ಇದು ಸಿರಿಯಲ್ ಕಿಲ್ಲರ್ ಕೆಲಸ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಪೊಲೀಸರು ಹೆಲ್ಪ್ಲೈನ್ ಕೂಡಾ ಆರಂಭ ಮಾಡಿದ್ದಾರೆ. ಪೊಲೀಸರ ತಂಡಗಳು ರಾತ್ರಿ ಹಗಲೆನ್ನದೆ ನಿರಂತರವಾಗಿ ಗಸ್ತು ತಿರುಗುತ್ತಿದ್ದು, ಸಂಶಯಾಸ್ಪದವಾಗಿ ಓಡಾಟ ನಡೆಸುವ ಹಲವು ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ಕೂಡಾ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
Click