ಬರಹ: ಲತಾಶ್ರೀ ಸುಪ್ರೀತ್ ಮೋಂಟಡ್ಕ, ಸುಳ್ಯ
“ಕತ್ತಲೆಯ ತಲೆ ಮೇಲೆ ಹಚ್ಚಿಬಿಟ್ಟಿರಿ ದೀಪ, ಅಜ್ಞಾನ ತತ್ತರಿಸೆ ಹಿಗ್ಗಾಯ್ತು ನಮಗೆ, ಉರಿಯುವ ದೀಪ ಉರಿಯುತಲಿರಲಿ, ತೆರೆಯುತ ಎಲ್ಲೆಡೆ ಬೆಳಕಿನ ಮಳಿಗೆ” ಎಂಬ ಹಿರಿಯ ಕವಿ ಕಿರಣ ಕುತ್ಯಾಳರ ಮಾತುಗಳನ್ನು ಇಲ್ಲಿ ನೆನಪಿಸುತ್ತಾ, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳಲ್ಲಿ ಸುಳ್ಯ ಎನ್ನುವ ಗ್ರಾಮೀಣ ಪ್ರದೇಶವು ಎಲ್ಲಾ ರೀತಿಯಲ್ಲಿಯೂ ತೀರಾ ಹಿಂದುಳಿದಿತ್ತು. ಇಂತಹ ಪ್ರದೇಶವನ್ನು ಭಾರತದ ಭೂಪಟದಲ್ಲಿ ಗುರುತಿಸುವಂತೆ ಮಾಡಿದವರು ದಿವಂಗತ ಡಾ. ಕುರುಂಜಿ ವೆಂಕಟ್ರಮಣ ಗೌಡರು. ಆಧುನಿಕ ಸುಳ್ಯದ ಸೃಷ್ಟಿಕರ್ತರಾದ ಇವರು ಸುಳ್ಯ ಎಂಬ ಕುಗ್ರಾಮವನ್ನು ಇಡೀ ದೇಶಕ್ಕೆ ಪರಿಚಯಿಸುತ್ತಾ, ಉನ್ನತ ವ್ಯಾಸಂಗಕ್ಕೆ ಬೇಕಾಗಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಈ ಪುಟ್ಟ ಊರಲ್ಲಿ ಸ್ಥಾಪಿಸಿ ‘ಶಿಕ್ಷಣ ಬ್ರಹ್ಮ’ ಎಂದೇ ಪ್ರಸಿದ್ಧರಾದರು. ಸುಳ್ಯದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಜ್ಞಾನದ ಜ್ಯೋತಿ ಬೆಳಗಿಸಿದ ಶಿಕ್ಷಣ ಬ್ರಹ್ಮ ತನ್ನ 85ರ ಹರೆಯದಲ್ಲಿ ಇಹಲೋಕವನ್ನು ತ್ಯಜಿಸಿದ್ದು ನಮಗೆಲ್ಲರಿಗೂ ತುಂಬಲಾರದ ನಷ್ಟ. ದೀನ ದಲಿತರಿಗೆ, ಬಡವ ಬಲ್ಲಿದ, ಸಮಾಜದ ಎಲ್ಲಾ ವರ್ಗದವರಿಗೂ ಆರೋಗ್ಯ ಸೇವೆಯನ್ನು ಕಲ್ಪಿಸಿದವರು, ಸಹಾಯ ಹಸ್ತ ಬಯಸಿ ಬಂದವರಿಗೆ ಸಹಾಯವಿತ್ತವರು, ಎಲ್ಲಾರೂ ವಿದ್ಯಾವಂತಾರಾಗಬೇಕೆಂಬ ಅವರ ಕನಸನ್ನು ನನಸು ಮಾಡಲು ಹತ್ತು ಹಲವು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಕೈಗೆಟಕುವ ದರದಲ್ಲಿ ವಿಧ್ಯೆಯನ್ನು ನೀಡಿದ ಕಾಯಕ ಯೋಗಿ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರತಿಷ್ಠಿತ ಕುರುಂಜಿ ಮನೆತನದ ದಿ. ಮಹಾಲಿಂಗ ಮಾಸ್ತರ್ ಹಾಗೂ ಲಕ್ಷ್ಮಿ ದಂಪತಿಗಳ ಏಳು ಜನ ಮಕ್ಕಳಲ್ಲಿ ಎರಡನೇ ಮಗನಾಗಿ 1928 ಡಿಸೆಂಬರ್ 26ರಂದು ಜನಿಸಿದ ಇವರು ಬಾಲ್ಯದಿಂದಲೇ ಬಡತನದ ಬೆಗೆಯಲ್ಲಿ ಬೆಂದವರು. ತನ್ನ 15ನೇ ವಯಸ್ಸಿನಲ್ಲಿಯೇ 1943ರಲ್ಲಿ ತಂದೆಯನ್ನು ಕಳೆದುಕೊಂಡಾಗ ಆರು ಮಂದಿ ಗಂಡು ಮಕ್ಕಳು ಮತ್ತು ಒಬ್ಬಾಕೆ ಮಗಳು ತಬ್ಬಲಿಗಳಾದರು. ಇದರಿಂದಾಗಿ ಎಂಟನೇ ತರಗತಿಯ ವಿದ್ಯಾಬ್ಯಾಸಕ್ಕೆ ತೃಪ್ತಿಪಟ್ಟು ಅಣ್ಣ ವಿಶ್ವನಾಥ ಗೌಡ ಕೆ. ಎಂ.,ರೊಡನೆ ಕುಟುಂಬದ ಆಸರೆಗೆ ಹೆಗಲು ಕೊಡುವುದರ ಮೂಲಕ ‘ಪಿತೃ ಸಮಾನ ಬಾತೃ’ ಎಂಬ ಪರಂಪರೆಯ ಗ್ರಹಿಕೆಯಲ್ಲಿ ಜವಾಬ್ದಾರಿಯ ಭಾರವನ್ನು ಸಮಾನವಾಗಿ ಹೊರುವುದರ ಮೂಲಕ ಸೋದರತ್ವವನ್ನು ಮೆರೆದವರು ಎಂಬುದನ್ನು ನಾವು ತಿಳಿದಿದ್ದೇವೆ. ಇದ್ದ ಅಲ್ಪ ಸ್ವಲ್ಪ ಕೃಷಿಯಲ್ಲಿ ಬದುಕು ಸಾಗಿಸುತ್ತಾ 1955ರಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ಕೃಷಿಭೂಮಿ ಖರಿದಿಸಿ 800ಕ್ಕಿಂತಲೂ ಅಧಿಕ ತೆಂಗಿನ ಸಸಿಗಳನ್ನು ಸ್ವತ: ತಾವೇ ನೆಟ್ಟು ಬೆಳೆಸಿದರು. ತದನಂತರ ಹಂತಹಂತವಾಗಿ ಅಡಿಕೆ ಸಸಿ, ಕಾಳುಮೆಣಸು, ಕೊಕ್ಕೊ ಮುಂತಾದ ಬೆಳೆಗಳನ್ನು ಬೆಳೆದರು. ಅದರಿಂದ ಬಂದಂತಹ ಆದಾಯವನ್ನು ಶಿಕ್ಷಣ ಸಂಸ್ಥೆಗಳಿಗೆ ವಿನಿಯೋಗಿಸುತ್ತಾ ಬಂದರು. ಜೊತೆಗೆ ಕುಟುಂಬ ನಿರ್ವಹಣೆಗೆ ಚಿಕ್ಕ ಗೂಡಂಗಡಿ ತೆರೆದು ವ್ಯಾಪಾರವನ್ನು ಆರಂಭಿಸಿ ಯಶಸ್ವಿಯಾದವರು. ಮುಂದೆ ಸುಳ್ಯದಲ್ಲಿ ಬೃಹತ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಇತಿಹಾಸವೇ ತಿರುಗಿ ನೋಡುವಂತೆ ಮಾಡಿದವರು. ಸುಳ್ಯ ತಾಲೂಕು 60ರ ದಶಕದಲ್ಲಿ ಬಹಳ ಹಿಂದುಳಿದು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಬಹಳ ದೂರ ಇತ್ತು. ಇದನ್ನರಿತ ಡಾ. ಕುರುಂಜಿಯವರು ಸುಳ್ಯ ನಗರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕೆಂದು 1950ರಲ್ಲಿ ಸುಳ್ಯದಲ್ಲಿ ಬೋರ್ಡ್ ಹೈಸ್ಕೂಲ್ ತೆರೆಯಲು ಶಕ್ತರಾದರು. ಹೈಸ್ಕೂಲ್ ಅಭಿವೃದ್ಧಿಗಾಗಿ ಕುರುಂಜಿಯವರು ಸ್ವತ: ಕಲಾವಿದರಾಗಿ 2 ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಿ ಅದ್ದರಿಂದ ಧನ ಸಂಗ್ರಹ ಮಾಡಿದವರು. ಸುಳ್ಯಕ್ಕೊಂದು ಪ್ರತ್ಯೇಕ ತಾಲೂಕು ರಚನೆ, ತಾಲೂಕು ಕಛೇರಿ, ನ್ಯಾಯಾಲಯ, ಆಸ್ಪತ್ರೆ ಅಲ್ಲದೇ ವಿದ್ಯುತ್, ದೂರವಾಣಿ ಸಂಪರ್ಕ ಮಾಡುವಲ್ಲಿಯೂ ಇವರ ಕಾರ್ಯ ಸ್ಮರಣೀಯವಾದದು.
ಅಜ್ಞಾನ, ಅನಕ್ಷರತೆ, ಅನಾರೋಗ್ಯ ಹಾಗೂ ದಾರಿದ್ರ್ಯದ ವಿರುದ್ಧ ಸಮರ ಸಾರಿದವರು. ಕಠಿಣ ದುಡಿಮೆ, ಸಮಗ್ರತೆ, ಪ್ರಾಮಾಣಿಕತೆ, ಸಮಯಪಾಲನೆ, ತ್ಯಾಗ ಮನೋಭಾವ ಇವರ ಯಶಸ್ಸಿನ ಪಂಚ ಸೂತ್ರಗಳಾಗಿದ್ದವು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಆಲಸ್ಯ ಇವರ ಸಪ್ತ ಶತ್ರುಗಳಾಗಿದ್ದವು. ನಾನು ಬರುವಾಗ ಏನನ್ನೂ ತಂದಿಲ್ಲ, ಹೋಗುವಾಗ ಏನನ್ನೂ ಕೊಂಡೊಯ್ಯುವುದಿಲ್ಲ, ಇಲ್ಲಿ ಗಳಿಸಿದ್ದನ್ನು ಇಲ್ಲಿಯೇ ವ್ಯಯಿಸಿದ್ದೇನೆ ಎನ್ನುತ್ತಿದ್ದರು. ರಕ್ತ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧ ದೊಡ್ಡದು, ಹತ್ತು ಜನ ನೆನಪಿಟ್ಟುಕೊಳ್ಳುವಂತಹ ಕೆಲಸ ಮಾಡದವರ ಜೀವನ ವ್ಯರ್ಥ ಎನ್ನುತ್ತಿದ್ದರು.
ಕುರುಂಜಿ ಅವರ ವ್ಯಕ್ತಿತ್ವ ಮಾತಿಗೆ ನಿಲುಕದ್ದು. ಜೀವನದಲ್ಲಿ ಪರನಿಂದನೆ, ಅಮಲು ಪದಾರ್ಥ ಸೇವನೆ, ಧೂಮಪಾನ, ಜುಗಾರಿ, ಕಳ್ಳತನ, ದರೋಡೆ, ಮುಂತಾದ ದುಶ್ಚಟಗಳಿಂದ ದೂರವಿರಲು ಕಿವಿಮಾತುಗಳನ್ನು ಹೇಳುತ್ತಿದ್ದರು.
ಕಠಿಣ ಪರಿಶ್ರಮದಿಂದ ಕೆವಿಜಿಯವರು 1967ರಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ, ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅವರು ಸ್ಥಾಪಕಾಧ್ಯಕ್ಷರಾಗಿ ಜೊತೆಗೆ ಪದಾಧಿಕಾರಿಗಳನ್ನು ನೇಮಿಸಿ ವಿದ್ಯಾಸಂಸ್ಥೆಗಳನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಾ, ಪ್ರಪ್ರಥಮವಾಗಿ 1976ರಲ್ಲಿ ನೆಹರೂ ಸ್ಮಾರಕ ಮಹಾವಿದ್ಯಾಲಯವನ್ನು ಸ್ಥಾಪಿಸುವುದರ ಮೂಲಕ ಶಿಕ್ಷಣ ವಂಚಿತರಾದ ಅದೇಷ್ಟೊ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ, ಕೆ.ಜಿಯಿಂದ ಪಿ.ಜಿಯವರೆಗೆ ಸಾಮಾನ್ಯ, ತಾಂತ್ರಿಕ, ಪಾಲಿಟೆಕ್ನಿಕ್, ಕಾನೂನು, ಐಟಿಐ, ಪ್ಯಾರಮೆಡಿಕಲ್, ಆಯುರ್ವೇದ, ದಂತ ಹಾಗೂ ವೈಧ್ಯಕೀಯ ಮಹಾವಿದ್ಯಾಲಯಗಳನ್ನು ಸ್ಥಾಪಿಸಿ ಸುಳ್ಯವನ್ನು ಶಿಕ್ಷಣಕಾಶಿಯನ್ನಾಗಿ ಪರಿವರ್ತಿಸಿದ ಇವರು ಶಿಕ್ಷಣದಿಂದ ಮಾನವ ಪರಿಪೂರ್ಣತೆ ಹೊಂದಲು ಸಾಧ್ಯ ಎನ್ನುತ್ತಾ, ‘ಜ್ಞಾನಂ ಸರ್ವತ್ರ ಸಾಧನಂ’, ಎಂಬ ತತ್ವದಡಿ ವಿದ್ಯಾಸಂಸ್ಥೆಗಳನ್ನು ಬೆಳೆಸಿಕೊಂಡು ಬಂದವರು. ಇದರ ಜೊತೆಗೆ 600ಕ್ಕಿಂತ ಹೆಚ್ಚು ಹಾಸಿಗೆಯುಳ್ಳ ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಅನೇಕ ರೋಗಿಗಳಿಗೆ ಉಚಿತ ಹಾಗೂ ರಿಯಾಯಿತಿ ದರದ ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಾ ಇಂದಿನ ಜನಾಂಗಕ್ಕೆ ದಾರಿ ದೀಪವಾಗಿದ್ದಾರೆ. ಸುಳ್ಯದಲ್ಲಿ ಮಾತ್ರವಲ್ಲದೇ ಅರಂತೋಡು, ಕೊಲ್ಲಮೊಗ್ರ, ಪೆರಾಜೆ, ಪುತ್ತೂರು, ಭಾಗಮಂಡಲವಷ್ಟೇ ಅಲ್ಲದೇ ದೂರದ ಬೆಂಗಳೂರಿನಲ್ಲೂ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದ ಕೀರ್ತಿ ಅವರದ್ದು. ಶಿಕ್ಷಣ ಕ್ಷೇತ್ರದಲ್ಲಿ ಸುವರ್ಣ ಅಧ್ಯಾಯವನ್ನು ಸೃಷ್ಟಿಸಿದ ಇವರು ದಿನವೊಂದಕ್ಕೆ ಸುಮಾರು 18ಗಂಟೆಗಳ ಕಾಲ ನಿರಂತರ ಕಾರ್ಯ ನಿರತರಾಗಿದ್ದರು ಎಂದು ಹಿರಿಯರಿಂದ ಕೇಳಿ ತಿಳಿದಿದ್ದೇವೆ.
ಗ್ರಹಸ್ಥಾಶ್ರಮದ ಹೊಸ್ತಿಲಲಿ ನಿಂತ ಕುರುಂಜಿಯವರ ಬಾಳಹಾದಿಯಲ್ಲಿ ಜೊತೆಯಾದವರು 1954ರಲ್ಲಿ ಮರಗೋಡಿನ ಪರ್ಚನ ಮನೆಯ ಜಾನಕಿ ಅಮ್ಮನವರು. ಕುರುಂಜಿಯವರ ಪರಿಶ್ರಮದ ಹಿಂದೆ ತನನ್ನು ಪೂರ್ತಿಯಾಗಿ ತೊಡಗಿಸಿಕೊಳ್ಳುತ್ತಾ ಪತಿಯ ಕೆಲಸಕಾರ್ಯಗಳಲ್ಲಿ ಜೊತೆಯಾಗಿ ನಿಂತ ಮಹಾತಾಯಿ ಅವರು. ಇವರ ದಾಂಪತ್ಯದ ಫಲವಾಗಿ ಇವರು ಇಬ್ಬರು ಗಂಡುಮಕ್ಕಳು ಹಾಗೂ ಒಬ್ಬಾಕೆ ಹೆಣ್ಣುಮಗಳನ್ನು ಪಡೆಯುವಂತಾದರು. ಕುರುಂಜಿಯವರು ಕಟ್ಟಿ ಬೆಳೆಸಿದ ಶಿಕ್ಷಣಸಂಸ್ಥೆಗಳನ್ನು ಇವರುಗಳು ಮುನ್ನಡೆಸುತ್ತಾ ಮಾದರಿಯಾಗಿದ್ದಾರೆ.
ಕುರುಂಜಿಯವರ ಸಾಧನೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿ – ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಅಮೇರಿಕದ ಪ್ಲೋರಿಡಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್, ರಾಜೀವ್ ಗಾಂಧಿ ಏಕತಾ ಪ್ರಶಸ್ತಿ, ಗ್ಲೋರಿ ಆಫ್ ಇಂಡಿಯಾ ಪ್ರಶಸ್ತಿ, ಪರಿಸರರತ್ನ ಪ್ರಶಸ್ತಿ, ವಿಕಾಸಜ್ಯೋತಿ ಪ್ರಶಸ್ತಿ, ಇಂದಿರಾ ಗಾಂಧಿ ಸದ್ಭಾವನಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಉಡುಪಿ ಮನುಕುಲ ಭೂಷಣ ಪ್ರಶಸ್ತಿ, ಅಂತಾರಾಷ್ಟ್ರೀಯ
ಗೋಲ್ಡ್ ಸ್ಟಾರ್ ಮಿಲೇನಿಯಮ್ ಪ್ರಶಸ್ತಿ, ಮದರ್ ಎಕ್ಸಲೆನ್ಸ್ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅಮೇರಿಕನ್ ಮೆಡಲ್ ಆಫ್ ಆನರ್, ನೇಪಾಳ ಸ್ನೇಹ ಪ್ರಶಸ್ತಿ, ರಾಷ್ಟ್ರೀಯ ರತನ್ ಪ್ರಶಸ್ತಿ ಮತ್ತು ಇತರ ಹಲವಾರು ಪ್ರಶಸ್ತಿಗಳನ್ನು ಪಡಕೊಂಡಿರುತ್ತಾರೆ. ಶ್ರೀಯುತರ ಅಹಂ ರಹಿತ ಸರಳ ಸಜ್ಜನಿಕೆ, ಅನನ್ಯ ಮಾನವ ಮೌಲ್ಯಗಳೇ ಅವರನ್ನು ಇಂದು ನೆನಪು ಮಾಡುತಿದೆ. ಆದು ಮುಟ್ಟದ ಸೊಪ್ಪಿಲ ಎಂಬಂತೆ ಕುರುಂಜಿಯವರು ಕೈಆಡಿಸದ ಕ್ಷೇತ್ರವಿಲ್ಲ. ಧಾರ್ಮಿಕ ಕ್ಷೇತ್ರಗಳನ್ನು ಉದ್ದಾರಿಸಿದ್ದಾರೆ. ಸಾಹಿತ್ಯ ಮತ್ತು ಲಲಿತಾ ಕಲಾ ಸೇವೆಯಲ್ಲಿ ತೊಡಗಿಸಿಕೊಂಡ ಶ್ರೀಯುತರು ಯಕ್ಷಗಾನ ಬಳಗದ ಒಕ್ಕೂಟಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ತೀರಾ ಹಿಂದುಳಿದ ಪ್ರದೇಶವಾಗಿದ್ದ ಸುಳ್ಯವನ್ನು ಶಿಕ್ಷಣದ ನಂದನವನವನ್ನಾಗಿಸಿ ವಿದ್ಯೆ ಎಂಬ ಜ್ಯೋತಿಯನ್ನು ಬಡವನ ಹೃದಯದಲ್ಲಿಯೂ ಬೆಳಗಿಸಿದ ಶಿಕ್ಷಣ ಕ್ರಾಂತಿಯ ಹರಿಕಾರ, ಸಮಾಜ ಸೇವಕ ಕೊಡುಗೈ ದಾನಿ, ಧಾರ್ಮಿಕ ಕ್ಷೇತ್ರದ ನೇತಾರ, ಪ್ರಶಸ್ತಿಪುರಸ್ಕಾರಗಳ ಸರದಾರ, ಸರಳ ಸಜ್ಜನಿಕೆಯ ಸಾಕಾರಮೂರ್ತಿ, ಸುಳ್ಯದ ಅಮರಶಿಲ್ಪಿ ಕುರುಂಜಿಯವರಿಂದ ಸುಳ್ಯದಲ್ಲಾದ ಪ್ರಗತಿ ಒಂದು ಕ್ರಾಂತಿಯೇ ಸರಿ. ಇಂತಹ ಮಹಾನ್ ಚೇತನ ನಮ್ಮನಗಲಿ ಇಂದಿಗೆ ಹನ್ನೊಂದು ವರುಷ…. ಏಕಾಂಗಿ ವೀರನಾಗಿ ತನ್ನ ದೂರದರ್ಶಿತ್ವದಿಂದ ಇಡೀ ಸುಳ್ಯವನ್ನು ಊಹಿಸುವುದಕ್ಕೂ ಅಸಾಧ್ಯವಾಗಿ ಮೇಲ್ದರ್ಜೆಗೇರಿಸಿದ ಇವರ ಸಾಧನೆ ನಮ್ಮೆಲ್ಲರಿಗೂ ದಾರಿ ದೀಪವಾಗಲಿ.