ನ್ಯೂಸ್ ನಾಟೌಟ್ : ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಕುಳ್ಳಿರಿಸಿ ಬಳಿಕ ಕೆಲ ದೂರ ಸಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆತನ ಬಳಿಯಿದ್ದ ಚಿನ್ನ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಕೊಡಗಿನ ವಿರಾಜಪೇಟೆ ನಿವಾಸಿಯಾಗಿರುವ ಎಂ. ಗಂಗಾಧರ ನಗದು ಕಳೆದುಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಕಳೆದ ಶುಕ್ರವಾರ (ಆಗಸ್ಟ್ 9) ವಿರಾಜಪೇಟೆಯಿಂದ ಬಿಸಿ ರೋಡ್ ಗೆ ರಾತ್ರಿ ಸುಮಾರು ಒಂಬತ್ತು ಗಂಟೆಯ ವೇಳೆಗೆ ಬಂದಿದ್ದರು. ಬಂಟ್ವಾಳದ ನರಿಕೊಂಬಿನಲ್ಲಿರುವ ಅಣ್ಣನ ಮನೆಗೆ ತೆರಳಲು ಬಿ.ಸಿ.ರೋಡ್ ನಲ್ಲಿ ವಾಹನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಅದೇ ದಾರಿಯಲ್ಲಿ ಅಪರಿಚಿತ ಕಾರೊಂದು ಬಂದಿದ್ದು ಗಂಗಾಧರ ಎಂಬವರ ಬಳಿ ಕಾರಿನಲ್ಲಿ ಬಂದವರು ಯಾವ ಕಡೆ ಹೋಗುವವರು ಎಂದು ವಿಚಾರಿಸಿದ್ದಾರೆ. ಅಲ್ಲದೆ ನಾವು ಕೂಡ ಅದೇ ಮಾರ್ಗವಾಗಿ ಹೋಗುತ್ತಿದ್ದು ನಿಮ್ಮನ್ನು ಡ್ರಾಪ್ ಮಾಡುತ್ತೇವೆ ಎಂದು ಹೇಳಿ ಗಂಗಾಧರ ಅವರನ್ನು ಕಾರಿಗೆ ಹತ್ತಿಸಿದ್ದಾರೆ.
ಕಾರು ಕೆಲ ದೂರ ಪ್ರಯಾಣಿಸುತ್ತಿದ್ದಂತೆ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ಇಬ್ಬರು ವ್ಯಕ್ತಿಗಳು ಗಂಗಾಧರ ಅವರ ಮೇಲೆ ಹಲ್ಲೆ ನಡೆಸಿ ಬಳಿಕ ಅವರ ಬಳಿಯಿದ್ದ 80 ಸಾವಿರ ರೂ. ಮೌಲ್ಯದ ಚಿನ್ನದ ಸರ ಮತ್ತು 2 ಸಾವಿರ ರೂ. ನಗದು ಹಣವನ್ನು ಕಸಿದುಕೊಂಡು ಬಳಿಕ ಅವರನ್ನು ಕಾರಿನಿಂದ ದೂಡಿ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ಗಂಗಾಧರ ಹೇಗೋ ಅಲ್ಲಿದ್ದ ಸಾರ್ವಜನಿಕರ ಸಹಾಯದಿಂದ ಸಹೋದರನಿಗೆ ಕರೆ ಮಾಡಿ ವಿಚಾರ ತಿಳಿಸಿ ಗಾಯಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಬುಧವಾರ (ಆಗಸ್ಟ್ 14) ರಂದು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click