ನ್ಯೂಸ್ ನಾಟೌಟ್: 4 ವರ್ಷ ಪುಟ್ಟ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕ್ರೌರ್ಯ ಪ್ರದರ್ಶನ ಮಾಡಿದ್ದ ಆರೋಪಿಯನ್ನ ಬಂಧಿಸುವಂತೆ ಜನಾಕ್ರೋಶದ ಏಳುವ ಮುನ್ನವೇ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ, ಘಟನೆ ಬೆಳಕಿಗೆ ಬಂದ ಎಂಟು ಗಂಟೆಗಳ ಒಳಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.
ಈ ಘಟನೆ ಉತ್ತರ ಪ್ರದೇಶ ರಾಜ್ಯದ ಪುಣ್ಯ ಭೂಮಿ ಅಯೋಧ್ಯೆ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಮಹಾರಾಜಾ ಗಂಜ್ ಎಂಬ ಗ್ರಾಮದ ನಿವಾಸಿಯಾದ 4 ವರ್ಷ ವಯಸ್ಸಿನ ದಲಿತ ಸಮುದಾಯದ ಬಾಲಕಿ ಮೇಲೆ 35 ವರ್ಷ ವಯಸ್ಸಿನ ಮೊಹಮ್ಮದ್ ಸಲ್ಮಾನ್ ಎಂಬಾತ ಆ.26ರ ರಾತ್ರಿ ಅತ್ಯಾಚಾರ ಎಸಗಿದ್ದ. ಬಳಿಕ ಘಟನೆ ಬೆಳಕಿಗೆ ಬಂದ ಕೂಡಲೇ ಆರೋಪಿ ನಾಪತ್ತೆಯಾಗಿದ್ದ.
ಸೋಮವಾರ ಸಂಜೆ ಬಾಲಕಿ ನಾಪತ್ತೆಯಾಗಿದ್ದಳು. ಬಾಲಕಿಯ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ ಪೊಲೀಸ್ ಸರ್ಕಲ್ ಆಫೀಸರ್ ಸರ್ದಾರ್ ಸಂದೀಪ್ ಸಿಂಗ್ ಅವರು, ಕೇವಲ 5 ಗಂಟೆಗಳ ಅವಧಿಯಲ್ಲೇ ಬಾಲಕಿಯನ್ನ ಪತ್ತೆ ಮಾಡಿದ್ದರು. ಆಕೆ ಮೊಹಮ್ಮದ್ ಸಲ್ಮಾನ್ನ ಮನೆಯಲ್ಲಿ ಪ್ರಜ್ಞಾಹೀನಳಾಗಿ ಪತ್ತೆಯಾಗಿದ್ದಳು. ಆಕೆಯ ಮೈ ತುಂಬಾ ಗಾಯದ ಗುರುತುಗಳಿದ್ದವು. ರಕ್ತ ಕೂಡಾ ಸುರಿಯುತ್ತಿತ್ತು. ಕೂಡಲೇ ಸ್ಥಳೀಯರ ನೆರವಿನಿಂದ ಬಾಲಕಿಯನ್ನ ರಕ್ಷಣೆ ಮಾಡಲಾಗಿತ್ತು.
ಬಾಲಕಿಯನ್ನು ಆಸ್ಪತ್ರೆಗೆ ಕರೆ ತಂದ ಬಳಿಕ ಆಕೆಯ ತಪಾಸಣೆ ನಡೆಸಿದ ವೈದ್ಯರು ಆಕೆ ಮೇಲೆ ಅತ್ಯಾಚಾರ ನಡೆದಿದೆ ಎಂದು ಖಚಿತಪಡಿಸಿದರು. ಪೊಲೀಸರಿಗೆ ಅದಾಗಲೇ ಮೇಲ್ನೋಟಕ್ಕೆ ಅತ್ಯಾಚಾರ ನಡೆದಿರೋದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಮೊಹಮ್ಮದ್ ಸಲ್ಮಾನ್ನ ಪತ್ತೆ ಮಾಡಿದ್ದಾರೆ. ಆರೋಪಿ ಬಳಿ ಶಸ್ತ್ರಾಸ್ತ್ರ ಇದೆ ಎಂದು ಖಚಿತವಾದ ಕೂಡಲೇ ತಾವು ಪ್ರತಿದಾಳಿ ನಡೆಸಿದ ಪೊಲೀಸರು, ಆತ್ಮ ರಕ್ಷಣೆಗಾಗಿ ಆತನ ಮೇಲೆ ಗುಂಡು ಹಾರಿಸಿದರು. ಪೊಲೀಸರು ಹಾರಿಸಿದ ಗುಂಡು ಆರೋಪಿಯ ಕಾಲಿಗೆ ತಗುಲಿ ಗಾಯಗೊಂಡ. ಆಯತಪ್ಪಿ ಕುಸಿದು ಬಿದ್ದ ಆರೋಪಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸರು, ಆತನ ಬಳಿ ಇದ್ದ ಶಸ್ತ್ರಾಸ್ತ್ರವನ್ನೂ ವಶಕ್ಕೆ ಪಡೆದಿದ್ದಾರೆ.
Click