ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಕನಿಷ್ಠ ಎಂಟು ಮಂದಿಯನ್ನು ಕೊಂದಿದ್ದ ತೋಳಗಳನ್ನು ಕೊನೆಗೂ ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ಗುರುವಾರ(ಆ.29) ತಿಳಿಸಿದ್ದಾರೆ. ಆದರೆ ಈ ಹಿಂಡಿನಲ್ಲಿದ್ದ ಇನ್ನೂ ಎರಡು ತೋಳಗಳು ಇನ್ನೂ ಸೆರೆಸಿಕ್ಕಿಲ್ಲ. ಹೀಗಾಗಿ ಆತಂಕ ಹೆಚ್ಚಾಗಿದೆ ಎನ್ನಲಾಗಿದೆ.
ಏಳು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ, ಕಳೆದ ಎರಡು ತಿಂಗಳಲ್ಲಿ ಬಹ್ರೈಚ್ ಜಿಲ್ಲೆಯಲ್ಲಿ ಕನಿಷ್ಠ ಎಂಟು ಮಂದಿ ತೋಳದ ದಾಳಿಗಳಲ್ಲಿ ಬಲಿಯಾಗಿದ್ದರು. ಮಂಗಳವಾರ ರಾತ್ರಿ ನಡೆದ ಕೊನೆಯ ದಾಳಿಯಲ್ಲಿ ಶಿಶುವೊಂದು ತೋಳಕ್ಕೆ ಬಲಿಯಾಗಿತ್ತು.
ಆರು ತೋಳಗಳ ಹಿಂಡಿನಲ್ಲಿದ್ದ ದಾಳಿಕೋರ ತೋಳವು ನಿರ್ದಿಷ್ಟ ದಾರಿಯಲ್ಲಿ ಓಡುವಂತೆ ಪಟಾಕಿಗಳನ್ನು ಸಿಡಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ತಮ್ಮ ಬಲೆಗೆ ಬೀಳಿಸಿದ್ದಾರೆ. ತೋಳದ ಪ್ರಜ್ಞೆ ತಪ್ಪಿಸಿದ ಅಧಿಕಾರಿಗಳು ಮೃಗಾಲಯವೊಂದಕ್ಕೆ ಅದನ್ನು ಸಾಗಿಸಿದ್ದಾರೆ. ಈವರೆಗೂ ಒಟ್ಟು ನಾಲ್ಕು ತೋಳಗಳನ್ನು ಅಧಿಕಾರಿಗಳು ಸೆರೆಹಿಡಿದ್ದಾರೆ. ಇನ್ನೂ ಎರಡು ಕಾಡು, ಹಳ್ಳಿಗಳ ನಡುವೆ ಓಡಾಡಿಕೊಂಡಿವೆ ಎಂದು ಮಾಹಿತಿ ಲಭಿಸಿದೆ.
ಈ ನರಭಕ್ಷಕ ತೋಳಗಳನ್ನು ಸೆರೆಹಿಡಿಯಲು ಉತ್ತರ ಪ್ರದೇಶ ಸರ್ಕಾರವು ‘ಆಪರೇಷನ್ ಭೇಡಿಯಾ’ (ತೋಳ) ಕಾರ್ಯಾಚರಣೆ ಆರಂಭಿಸಿದ್ದರು. ಬಹ್ರೈಚ್ ಜಿಲ್ಲೆಯ ಮೆಹ್ಸಿ ತಾಲೂಕಿನಲ್ಲಿ ಬೇಟೆಯಾಡುತ್ತಾ ಅಡ್ಡಾಡುತ್ತಿದ್ದ ಈ ತೋಳಗಳ ಹಿಂಡನ್ನು ಹಿಡಿಯುವುದು ಸುಲಭದ ಮಾತಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Click