ನ್ಯೂಸ್ ನಾಟೌಟ್: 121 ಜನರ ಸಾವಿಗೆ ಕಾರಣವಾದ ಹಾಥರಸ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಮತ್ತು ನಾಲ್ಕು ಪುರುಷರು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಗುರುವಾರ(ಜುಲೈ 4) ತಿಳಿಸಿದ್ದಾರೆ.
ಪ್ರಮುಖ ಆರೋಪಿ ಸಂಘಟಕ ದೇವಪ್ರಕಾಶ್ ಮಧುಕರ್ ಬಂಧನಕ್ಕೆ ಸಹಾಯ ಮಾಡುವವರಿಗೆ ₹1 ಲಕ್ಷ ಬಹುಮಾನವನ್ನೂ ಪೊಲೀಸರು ಘೋಷಿಸಿದ್ದಾರೆ. ಬಂಧಿತರು ಸತ್ಸಂಗ ಸ್ವಯಂಸೇವಕರು ಎಂದು ಪೊಲೀಸರು ತಿಳಿಸಿದ್ದಾರೆ. “ಕಾಲ್ತುಳಿತ ಸಂಭವಿಸಿದಾಗ ಈಗ ಬಂಧಿಸಲಾಗಿರುವ ಆರು ಸೇವಕರು ಘಟನಾ ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದೆ. ಶೀಘ್ರದಲ್ಲೇ ಪ್ರಕಾಶ್ ಮಧುಕರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಜೊತೆ ನಾರಾಯಣ್ ಸಕಾರ್ ಹರಿ(ಬೋಲೆ ಬಾಬ) ಕೂಡ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
” ನಾವು ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದೇವೆ. ಸತ್ಸಂಗದ ಸ್ವಯಂಸೇವಕರು ಸತ್ಸಂಗ ಮುಗಿದ ನಂತರ ಜನಸಂದಣಿಯನ್ನು ನಿಭಾಯಿಸುವಾಗ ನಿರ್ಲಕ್ಷ್ಯ ತೋರಿದ್ದಾರೆ. ವಿಷಯಗಳು ಕೈ ಮೀರುತ್ತಿದ್ದಂತೆ, ಅವರು ಪರಾರಿಯಾಗಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ. ಕೇವಲ 80,000 ಮಂದಿಗೆ ಮಾತ್ರ ಅನುಮತಿ ನೀಡಿದ ಕಾರ್ಯಕ್ರಮಕ್ಕೆ 2.5 ಲಕ್ಷ ಜನರು ಸೇರುವ ಮೂಲಕ ಸಾಕ್ಷ್ಯಗಳನ್ನು ಮರೆಮಾಚಿದ್ದಾರೆ ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
Click 👇