ನ್ಯೂಸ್ ನಾಟೌಟ್: ಆಂಧ್ರದ ಖತರ್ನಾಕ್ ಕಳ್ಳರ ತಂಡವೊಂದನ್ನು ಅಡ್ಡಗಟ್ಟಿದಾಗ ಪೊಲೀಸ್ ಜೀಪ್ಗೆ ಕಲ್ಲು ತೂರಿ, ಪೊಲೀಸರು ಏರ್ ಫೈರ್ ಮಾಡಿದರೂ ಕ್ಯಾರೇ ಅನ್ನದೇ ಕಳ್ಳರು ಪರಾರಿಯಾದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ನಡೆದಿದೆ.
ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ 7 ಮಂದಿಯಿದ್ದ ಕಳ್ಳರ ತಂಡವೊಂದು ಆಂಧ್ರಪ್ರದೇಶದ ರಿಜಿಸ್ಟ್ರೇಷನ್ ಹೊಂದಿದ್ದ ಬೊಲೆರೋ ವಾಹನದಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿತ್ತು. ಇದನ್ನು ಗಮನಿಸಿದ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ತಡೆದು ಪರಿಶೀಲನೆಗೆ ಮುಂದಾಗಿದ್ದಾರೆ. ಕುದಾಪುರ ಬಳಿ ಕಳ್ಳರನ್ನು ಹಿಡಿಯಲು ಪೊಲೀಸರು ಬೊಲೆರೋ ವಾಹನ ಅಡ್ಡ ಹಾಕಿದ್ದರು. ಈ ವೇಳೆ ಕಳ್ಳರು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಪೊಲೀಸರು ಆತ್ಮರಕ್ಷಣೆಗಾಗಿ ಏರ್ ಫೈರಿಂಗ್ ಮಾಡಿದ್ದಾರೆ.
ಕಳ್ಳರು ಕಲ್ಲು ತೂರಿದ್ದರಿಂದ ಪೊಲೀಸರ ಜೀಪಿನ ಗ್ಲಾಸ್ ಒಡೆದಿದೆ. ಈ ವೇಳೆ ಗಾಡಿ ನಿಲ್ಲಿಸದೆ ಖತರ್ನಾಕ್ ಕಳ್ಳರು ಪರಾರಿಯಾಗಿದ್ದಾರೆ.
ನಾಯಕನಹಟ್ಟಿ ಠಾಣೆ ಪಿಎಸ್ಐ ಶಿವಕುಮಾರ್ ತಂಡ ಬೊಲೆರೋ ವಾಹನದಲ್ಲಿ ಬಂದಿದ್ದ ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಹಿರೇಹಳ್ಳಿ, ಬೇಡರೆಡ್ಡಿಹಳ್ಳಿ, ಬುಕ್ಕಂಬೂದಿ ಮಾರ್ಗದಲ್ಲಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ಮೇಲೆಯೇ ಕಳ್ಳರ ದಾಳಿ ಸುದ್ದಿ ತಿಳಿದು ಸ್ಥಳೀಯರು ಆತಂಕಗೊಂಡಿದ್ದಾರೆ.