ನ್ಯೂಸ್ ನಾಟೌಟ್: ಉದ್ಯಾನನಗರಿ ಬೆಂಗಳೂರಿನ ಜನ ಬರ್ಬರ ಹತ್ಯೆಗೆ ಸಾಕ್ಷಿಯಾಗಿದ್ದಾರೆ. ಆರೋಪಿ ವ್ಯಕ್ತಿಯೊಬ್ಬರನ್ನು ತುಂಡು ತುಂಡಾಗಿ ಕತ್ತರಿಸಿ ಹತ್ಯೆ ಮಾಡಿದ್ದಾನೆ. ಮಾತ್ರವಲ್ಲ ಸಾಕ್ಷಿ ಸಿಗಬಾರದೆಂದು ದೇಹದ ಭಾಗಗಳನ್ನು ಮೋರಿಗೆ ಎಸೆದಿದ್ದಾನೆ. ಸದ್ಯ ಮೃತ ದೇಹದ ಪತ್ತೆಗೆ ಪೊಲೀಸರು ಪ್ರಯತ್ನ ನಡೆಸುತ್ತಿದ್ದರಾದರೂ ಉಪಯೋಗವಾಗಿಲ್ಲ ಎಂದು ತಿಳಿದು ಬಂದಿದೆ. ಈ ದುರ್ಘಟನೆ ರಾಮಮೂರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಪಟ್ಟವರನ್ನು ಕೆವಿ ಶ್ರೀಕಾಂತ್ (34) ಎಂದು ಗುರುತಿಸಲಾಗಿದೆ. ಮಾಧವ ರಾವ್ ಎಂಬಾತನೇ ಕೊಲೆ ಆರೋಪಿಯಾಗಿದ್ದಾನೆ.
ಬಸವೇಶ್ವರನಗರದಲ್ಲಿರುವ ಮಾರ್ಗದರ್ಶಿ ಚೀಟ್ ಫಂಡ್ನಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದ ಶ್ರೀಕಾಂತ್, ಥಣಿಸಂದ್ರದ ಅಂಜನಾದ್ರಿ ಲೇಔಟ್ನಲ್ಲಿ ವಾಸವಿದ್ದರು. ಮೇ 28ರ ಬೆಳಗ್ಗೆ ಮನೆಯಿಂದ ಹೊರಹೋಗಿದ್ದ ಶ್ರೀಕಾಂತ್ ಮನೆಗೆ ವಾಪಸ್ ಆಗಿಲ್ಲ. ಶ್ರೀಕಾಂತ್ ನಾಪತ್ತೆ ಬಗ್ಗೆ ಮೇ 29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಅವರ ಪತ್ನಿ ದೂರು ನೀಡಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಶ್ರೀಕಾಂತ್ ಮೇ 28ರಂದು ಮಾಧವರಾವ್ ಮನೆಗೆ ಹೋಗಿರುವುದು ಪತ್ತೆಯಾಗಿತ್ತು. ಕೆಆರ್ ಪುರಂನ ವಿಜಿನಪುರದಲ್ಲಿರುವ ಮಾಧವ ರಾವ್ ಮನೆಗೆ ಹೋಗಿರುವುದು ತಿಳಿದುಬಂದಿತ್ತು. ಮನೆಯ ಸಿಸಿಟಿವಿಯಲ್ಲಿ ಮಾಧವ ರಾವ್ ಮನೆಗೆ ಶ್ರೀಕಾಂತ್ ಪ್ರವೇಶಿಸಿರುವ ದೃಶ್ಯ ಸಿಕ್ಕಿತ್ತು. ಆದರೆ ಶ್ರೀಕಾಂತ್ ಮನೆಯಿಂದ ಹೊರಗೆ ಹೋಗುವುದು ರೆಕಾರ್ಡ್ ಆಗಿರಲಿಲ್ಲ. ಹೀಗಾಗಿ ಜೊತೆಗೆ ಮನೆಯ ಒಳಗಡೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ದವು. ಬಳಿಕ ಮಾಧವ ರಾವ್ ಬಗ್ಗೆ ವಿಚಾರಿಸಿದಾಗ ಆತನೂ ನಾಪತ್ತೆಯಾಗಿರುವುದು ತಿಳಿದು ಬಂದಿತ್ತು.