ನ್ಯೂಸ್ ನಾಟೌಟ್: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬುವರನ್ನು ಅಮಾನುಷವಾಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಹಾಗೂ ಆತನ ಸಹಚರರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಕಾಮಾಕ್ಷಿ ಪಾಳ್ಯ ಪೊಲೀಸರು ಮಂಗಳವಾರ(ಜೂ.11) ರಾತ್ರಿಯ ಊಟಕ್ಕೆ ಚಿಕ್ಕಪೇಟೆ ಬಿರಿಯಾನಿ ತಂದುಕೊಟ್ಟಿದ್ದಾರೆ ಎನ್ನಲಾಗಿದೆ.
ಪ್ರಕರಣದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಒಟ್ಟು ೧೩ ಆರೋಪಿಗಳಿದ್ದಾರೆ. ಅವರೆಲ್ಲರನ್ನೂ ನ್ಯಾಯಾಲಯ ಪೊಲೀಸರ ಕಸ್ಟಡಿಗೆ ನೀಡಿದೆ. ಪವಿತ್ರಾ ಸಾಂತ್ವನ ಕೇಂದ್ರದಲ್ಲಿ ಇದ್ದರೆ ಉಳಿದವರು ಕಾಮಾಕ್ಷಿಪಾಳ್ಯ ಪೊಲೀಸರ ವಶದಲ್ಲಿದ್ದಾರೆ. ರಾತ್ರಿಯ ಊಟಕ್ಕೆ ಪೊಲೀಸರು ಅವರೆಲ್ಲರಿಗೂ ಚಿಕ್ಕಪೇಟೆ ಬಿರಿಯಾನಿ ಪ್ಯಾಕೇಟ್ಗಳನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ. ದೊಡ್ಡ ಪ್ರಮಾಣದಲ್ಲಿ ಬಿರಿಯಾನಿ ಪ್ಯಾಕೆಟ್ಗಳನ್ನು ಕ್ಯಾರಿ ಬ್ಯಾಗ್ನಲ್ಲಿ ತುಂಬಿಸಿಕೊಂಡು ಹೋಗಿದ್ದು, ಜತೆಗೆ ಎಲ್ಲರಿಗೂ ಮಿನರಲ್ ವಾಟರ್ ನೀಡಲಾಗಿದೆ. ಆರೋಪಿಗಳು ಕೆಲವರು ಬೆಳಗ್ಗಿನಿಂದ ಬಂಧನ ಹಾಗೂ ಇನ್ನಿತರ ಕಾನೂನು ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಮೈಕೈ ನೋವು, ತಲೆ ನೋವು ಎಂದಿದ್ದು ಅವರೆಲ್ಲರಿಗೂ ಪೊಲೀಸರು ಡೋಲೋ 650 ಮಾತ್ರೆಯನ್ನೂ ತಂದಕೊಟ್ಟಿದ್ದಾರೆ ಎನ್ನಲಾಗಿದೆ.
ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಪ್ರಕರಣವಾಗಿರುವ ಕಾರಣ ತಮ್ಮ ವಶದಲ್ಲಿರುವ ಆರೋಪಿಗಳನ್ನು ಸರಿಯಾಗಿ ನೋಡಿಕೊಳ್ಳುವುದು ಪೊಲೀಸರಿಗೆ ಅನಿವಾರ್ಯ, ಇಲ್ಲವಾದರೆ ಕೋರ್ಟ್ ನಲ್ಲಿ ಪೊಲೀಸರ ವಿರುದ್ಧ ವಿಚಾರಣೆ ವೇಳೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸುವ ಸಾಧ್ಯತೆಗಳಿವೆ. ಜೊತೆಗೆ ಆರೋಪಿ ಪ್ರಭಾವಿಯೂ ಆಗಿರುವುದರಿಂದ ಇದು ಬಹಳ ಸೂಕ್ಷ್ಮವಾಗಿ ನಿಭಾಯಿಸಬೇಕಾದ ಪ್ರಕರಣವಾಗಿದ್ದು, ಹೀಗಾಗಿ ಅವರ ಊಟ, ತಿಂಡಿ ಹಾಗೂ ಇನ್ನಿತರ ಉಪಚಾರಗಳನ್ನು ಮಾಡಲು ಪೊಲೀಸರ ತಂಡ ನಾನಾ ರೀತಿಯ ಶ್ರಮಗಳನ್ನು ಹಾಕುತ್ತಿದೆ ಎನ್ನಲಾಗಿದೆ.
Click 👇