ನ್ಯೂಸ್ ನಾಟೌಟ್: ಆಸ್ಪತ್ರೆಯೊಳಗೆ ಪೊಲೀಸರು ವಾಹನ ನುಗ್ಗಿಸಿ ಆರೋಪಿಯನ್ನು ಬಂಧಿಸಿದ ಘಟನೆ ಉತ್ತರಾಖಂಡದ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಆರೋಪಿಯನ್ನು ಬೆನ್ನಟ್ಟಿದ ಪೊಲೀಸರು, ತಮ್ಮ ವಾಹನವನ್ನು ಸೀದಾ ರಿಷಿಕೇಶದಲ್ಲಿರುವ ಏಮ್ಸ್ನ ಎಮರ್ಜೆನ್ಸಿ ವಾರ್ಡಿಗೆ ನುಗ್ಗಿಸಿದ್ದಾರೆ. ಮಹಿಳಾ ವೈದ್ಯರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ನರ್ಸಿಂಗ್ ಅಧಿಕಾರಿಯನ್ನು ಬಂಧಿಸಲು ಪೊಲೀಸರು ಸಿನಿಮೀಯ ರೀತಿಯಲ್ಲಿ ಆಸ್ಪತ್ರೆ ಒಳಗೆ ವಾಹನ ಸಮೇತ ಪ್ರವೇಶಿಸಿದ್ದಾರೆ. ಮಂಗಳವಾರ(ಮೇ.21) ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಎಸ್ಯುವಿ ವಾಹನ ಒಳಗೆ ಬರುವಂತೆ ಭದ್ರತಾ ಸಿಬ್ಬಂದಿಯ ಗುಂಪು, ರೋಗಿಗಳನ್ನು ಸಾಗಿಸುತ್ತಿದ್ದ ಸ್ಟ್ರೆಚರ್ಗಳನ್ನು ಪಕ್ಕಕ್ಕೆ ತಳ್ಳುತ್ತಾ ದಾರಿ ತೆರವುಗೊಳಿಸುವುದು ವಿಡಿಯೋದಲ್ಲಿ ಕಂಡುಬಂದಿದೆ. ಕಾರಿನ ಒಳಗೆ ಕೆಲವು ಪೊಲೀಸ್ ಅಧಿಕಾರಿಗಳಿದ್ದರು ಎನ್ನಲಾಗಿದೆ. ಆರೋಪಿ ಬಂಧನಕ್ಕೆಂದು ಏಮ್ಸ್ ಆಸ್ಪತ್ರೆಗೆ ಪೊಲೀಸರು ಬರುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸತೀಶ್ ಕುಮಾರ್ ಎಸ್ಕೇಪ್ ಆಗಲು ಯತ್ನಿಸಿದ್ದ.
ಇದು ತಿಳಿದ ಡೆಹ್ರಾಡೂನ್ ಪೊಲೀಸರು ಆಸ್ಪತ್ರೆಯ ಒಳಗೆ ಜೀಪ್ ಚಲಾಯಿಸಿದಾರೆ. ನೇರವಾಗಿ ನಾಲ್ಕನೇ ಮಹಡಿಗೆ ತಲುಪಿದ ಜೀಪ್ ಐಸಿಯು ಒಳಗೆ ಬಂದು ನಿಂತಿದೆ. ಪ್ರತಿಷ್ಠಿತ ಆರೋಗ್ಯ ಸೌಕರ್ಯದ ಆಪರೇಷನ್ ಥಿಯೇಟರ್ ಒಳಗೆ ವೈದ್ಯೆಯೊಬ್ಬರಿಗೆ ನರ್ಸಿಂಗ್ ಅಧಿಕಾರಿ ಭಾನುವಾರ ಸಂಜೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ಆರೋಪಿ ಸತೀಶ್ ಕುಮಾರ್, ವೈದ್ಯೆಗೆ ಅಶ್ಲೀಲ ಎಸ್ಎಂಎಸ್ ಕೂಡ ಕಳುಹಿಸಿದ್ದ ಎಂದು ರಿಷಿಕೇಶ್ ಪೊಲೀಸ್ ಅಧಿಕಾರಿ ಶಂಕರ್ ಸಿಂಗ್ ಬಿಷ್ಟ್ ತಿಳಿಸಿದ್ದಾರೆ.
ಸತೀಶ್ ಕುಮಾರ್ನನ್ನು ಅಮಾನತು ಮಾಡಲಾಗಿದೆ. ಬೃಹತ್ ಸಂಖ್ಯೆಯಲ್ಲಿ ವೈದ್ಯರು ಪ್ರತಿಭಟನೆ ನಡೆಸುತ್ತಿರುವುದನ್ನು ಗಮನಿಸಿದ ಪೊಲೀಸರು, ಸತೀಶ್ ಕುಮಾರ್ನನ್ನು ಬಂಧಿಸಲು ಆಸ್ಪತ್ರೆಯ ಒಳಗೇ ವಾಹನ ನುಗ್ಗಿಸಲು ನಿರ್ಧರಿಸಿದ್ದರು. ಹಾಗೆಯೇ ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Click 👇