ನ್ಯೂಸ್ ನಾಟೌಟ್: ಗ್ರಾಮದ ಕೆರೆಗೆ ಕೆಲವು ದುಷ್ಕರ್ಮಿಗಳು ವಿಷ ಹಾಕಿ ಸಾವಿರಾರು ಮೀನುಗಳು ಸತ್ತಿರುವ ಘಟನೆ ದಾವಣಗೆರೆ ತಾಲೂಕಿನ ಎಲೆಬೇತೂರಿನಲ್ಲಿ ನಡೆದಿದೆ. ಗ್ರಾಮದ ಹೊರ ವಲಯದ ಎಲೆಬೇತೂರು ಗ್ರಾಮಕ್ಕೆ ಹೊಂದಿ ಕೊಂಡಿರುವ ಭದ್ರಾ ಕಾಲುವೆ ಆಶ್ರಿತವಾಗಿರುವ ಸುಮಾರು 126 ಎಕರೆ ವಿಸ್ತೀರ್ಣದ ಬೇತೂರು ಕೆರೆಯಲ್ಲಿ ಈ ಬರದಲ್ಲಿ ಸುಮಾರು 60 ಎಕರೆಯಷ್ಟು ನೀರು ಸಂಗ್ರಹವಾಗಿತ್ತು ಎನ್ನಲಾಗಿದೆ, ಕೆರೆ ಅಂಗಳದಲ್ಲಿ ಸುಮಾರು 20 ಅಡಿಗಳಷ್ಟು ಆಳದ ಗುಂಡಿಗಳಲ್ಲಿ 8-10 ಕೆಜಿ ತೂಕದ ಭಾರೀ ಮೀನುಗಳ ಮಾರಣ ಹೋಮ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ಎಲೆಬೇತೂರು ಗ್ರಾಮದ ಮಂಜಪ್ಪ ಬಾರಿಕೇರ, ಸಿದ್ದಪ್ಪ ಬಾರಿಕರ, ಹನುಮಂತಪ್ಪ ಜಕ್ಕಾವರು ಸೇರಿಕೊಂಡು ಮೀನುಗಾರಿಕೆ ಇಲಾಖೆಯಿಂದ ಟೆಂಡರ್ ಪಡೆದು, ಸುಮಾರು 8 ಲಕ್ಷ ಮೀನು ಮರಿಗಳನ್ನು ಬಿಟ್ಟಿದ್ದರು. 5 ವರ್ಷಗಳ ಹಿಂದೆ ಬಿಟ್ಟಿದ್ದ ಮೀನುಗಳ ಸಂತತಿ ಹೆಚ್ಚಾಗಿತ್ತು. ರವೂ, ಕಾಟ್ಲಾ, ಗೌರಿ, ಮಿರಗಲ್, ಬ್ಲಾಕ್ ಶಾರ್ಪ್ ಹೀಗೆ ನಾನಾ ಮೀನುಗಳ ಮರಿಗಳನ್ನು ಬಿಡಲಾಗಿತ್ತು.
ಎಲೆಬೇತೂರು ಕೆರೆಯ 126 ಎಕರೆ ಪೈಕಿ ಅರ್ಧದಷ್ಟು ನೀರು ಸಂಗ್ರಹ ಇತ್ತು. ಸಹಜವಾಗಿಯೇ ಮೀನುಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿತ್ತು. ಬುಧವಾರ ಬೆಳಿಗ್ಗೆಯಿಂದಲೇ ಗ್ರಾಮಸ್ಥರು, ಸುತ್ತಮುತ್ತಲಿನ ಊರಿನವರು ಮೀನುಗಳನ್ನು ಹಿಡಿದುಕೊಂಡು ಹೋದ ಸುದ್ದಿ ಗೊತ್ತಾಗಿ ಮಂಜಪ್ಪ, ಹನುಮಂತಪ್ಪ, ಸಿದ್ದಪ್ಪ ಕೆರೆ ಬಳಿ ಬಂದಿದ್ದರು. ಯಾರೋ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿರುವ ಸಾಧ್ಯತೆ ಇದೆ. ಕೆರೆ ಬಳಿ ವಿಷದ ಬಾಟಲು ಪತ್ತೆಯಾಗಿದೆ. ಸುಮಾರು 5 ಟನ್ನಷ್ಟು ಮೀನುಗಳು ಸಾವನ್ನಪ್ಪಿವೆ ಎಂದು ಆರೋಪಿಸಲಾಗಿದೆ.
Click 👇