ನ್ಯೂಸ್ ನಾಟೌಟ್: ಈಗೀಗ ನಮ್ಮ ಜನರು ಬುದ್ಧಿಮಾತು ಕೇಳುವುದಕ್ಕಿಂತ ಟಿವಿಯಲ್ಲಿ ಬರುವ ಕಾರ್ಯಕ್ರಮ ನೋಡಿಕೊಂಡೇ ಅಲ್ಲಿನದ್ದನ್ನೇ ಅನುಕರಿಸುವುದು ಜಾಸ್ತಿ. ಅದರಲ್ಲೂ ಧಾರವಾಹಿಗಳನ್ನು ನೋಡಿಕೊಂಡು ಫಾಲೋ ಮಾಡೋರು ಹೆಚ್ಚು ಅನ್ನುವುದು ನಿಜ. ಮನೋರಂಜನೆಗಾಗಿ ಕಾಲ್ಪನಿಕ ಕಥೆಯನ್ನು ಧಾರವಾಹಿಗಳಲ್ಲಿ ಕಟ್ಟಿದರೂ ಹೆಚ್ಚಿನ ಸಮಯದಲ್ಲಿ ಅದು ನೇರವಾಗಿ ಜನರ ಮೇಲೆ ಪರಿಣಾಮ ಬೀರುತ್ತದೆ ಅನ್ನುವುದು ನಿಜ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಯ ದೃಶ್ಯದಲ್ಲಿ ನಟಿಯೊಬ್ಬರು ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತು ಪ್ರಯಾಣಿಸಿದ್ದಾರೆ.
ಇದನ್ನು ಟಿವಿಯಲ್ಲಿ ವೀಕ್ಷಿಸಿದ ವ್ಯಕ್ತಿಯೊಬ್ಬರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಯಾಗಿದೆ. ಜನರಿಗೆ ತಪ್ಪು ಮಾಹಿತಿಯನ್ನು ಈ ಧಾರವಾಹಿ ಮೂಲಕ ನೀಡಲಾಗುತ್ತಿದೆ. ತಕ್ಷಣ ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಏನಿದು ಘಟನೆ..? ‘ಸೀತಾರಾಮ’ ಹೆಸರಿನ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಯ ಹದಿನಾಲ್ಕನೇ ಸಂಚಿಕೆಯ ದೃಶ್ಯ ದ್ವಿಚಕ್ರ ವಾಹನದಲ್ಲಿ ನಡೆದಿತ್ತು. ಇದರಲ್ಲಿ ಕುಳಿತಿದ್ದ ಸವಾರೆ ಹೆಲ್ಮೆಟ್ ಧರಿಸಿದ್ದರು. ಆದರೆ ಹಿಂಬದಿ ಕುಳಿತಿದ್ದ ನಟಿ ಹೆಲ್ಮೆಟ್ ಧರಿಸಿರಲಿಲ್ಲ. ಈ ದೃಶ್ಯ ವೀಕ್ಷಿಸಿದ ಮಂಗಳೂರಿನ ಜಯ ಪ್ರಕಾಶ್ ಅನ್ನುವವರು ನೇರವಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ. ದೂರಿನಲ್ಲಿ ಹೇಳಿರುವ ಪ್ರಕಾರವಾಗಿ, ಧಾರವಾಹಿಯಲ್ಲಿ ಸಂಚಾರ ನಿಯಮದ ಉಲ್ಲಂಘನೆಯಾಗಿದೆ.
ನಟ-ನಟಿಯರು ಇಂತಹ ಸಂದೇಶವನ್ನು ಜನರಿಗೆ ನೀಡುವುದರಿಂದ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ. ಹೀಗಾಗಿ ಧಾರವಾಹಿಯ ನಿರ್ದೇಶಕ, ನಟಿ ಹಾಗೂ ಪ್ರಸಾರ ಮಾಡಿದ ವಾಹಿನಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಅದರಂತೆ ಪೊಲೀಸರು ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದ್ದರು. ಈ ಧಾರವಾಹಿಯನ್ನು ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಚಿತ್ರೀಕರಿಸಲಾಗಿತ್ತು. ಈ ವಿಚಾರವನ್ನು ಅಲ್ಲಿನ ಪೊಲೀಸ್ ಠಾಣೆಗೆ ಕಳುಹಿಸಿಕೊಡಲಾಗಿತ್ತು. ಮೇ೧೦ರಂದು ನಟಿಗೆ ರೂ. ೫೦೦ ದಂಡ ವಿಧಿಸಲಾಗಿದೆ. ಮಾತ್ರವಲ್ಲ ಸಂಚಾರಿ ನಿಯಮವನ್ನು ಮುಂದೆ ಉಲ್ಲಂಘಿಸುವುದಿಲ್ಲ ಎಂದು ಧಾರವಾಹಿಯ ಪ್ರೊಡೆಕ್ಷನ್ ಮ್ಯಾನೇಜರ್ ರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ.