ನ್ಯೂಸ್ ನಾಟೌಟ್: ರಾತ್ರೋರಾತ್ರಿ ‘ಪರಶುರಾಮ ಥೀಂ ಪಾರ್ಕ್’ ಗೆ ಹೋಗುವ ರಸ್ತೆಗೆ ಕಾಂಗ್ರೆಸ್ ಮಣ್ಣು ಹಾಕಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಗಾಲು ಹಾಕುವ ಪ್ರಯತ್ನ ನಡೆಸಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಕಾರ್ಕಳದ ‘ಪರಶುರಾಮ ಥೀಂ ಪಾರ್ಕ್’ ವಿಚಾರ ಕಳೆದ ವಿಧಾನ ಸಭಾ ಚುನಾವಣೆ ವೇಳೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ‘ಪರಶುರಾಮ ಥೀಂ ಪಾರ್ಕ್’ನಲ್ಲಿರುವ ಮೂರ್ತಿ ಅದು ಕಂಚಿನದ್ದಲ್ಲ ಕಲಬೆರಕೆ ಆಗಿದೆಂದು ಕಾಂಗ್ರೆಸ್ ಟೀಕೆ ಮಾಡಿತ್ತು. ಈ ವಿಚಾರ ರಾಜ್ಯದ್ಯಂತ ಸದ್ದು ಮಾಡಿತ್ತು. ಹೈಕೋರ್ಟ್ ಕೂಡ ಇನ್ನು ನಾಲ್ಕು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಪರಶುರಾಮ ಥೀಂ ಪಾರ್ಕ್’ ಗೆ ಹೋಗುವ ರಸ್ತೆಗೆ ಕಾಂಗ್ರೆಸ್ ಟಿಪ್ಪರ್ ನಲ್ಲಿ ಮಣ್ಣು ಹಾಕಿಸಿ ರಸ್ತೆಯನ್ನೇ ಬಂದ್ ಮಾಡಿದೆ ಅನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಸ್ವತಃ ಇದನ್ನು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಗೆ ಕಾರ್ಕಳದ ಅಭಿವೃದ್ಧಿಗೆ ಬೇಕಿಲ್ಲ. ಸುಮ್ಮನೆ ರಾಜಕೀಯ ಮಾಡುವುದಷ್ಟೇ ಅದರ ಕೆಲಸ. ನ್ಯಾಯಾಲಯ ಪರಶುರಾಮ ಥೀಂ ಪಾರ್ಕ್’ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ಎಂದು ಆದೇಶ ನೀಡಿದೆ. ಆದರೆ ಇಲ್ಲಿನ ಕಾಂಗ್ರೆಸ್ ಪರಶುರಾಮ ಥೀಂ ಪಾರ್ಕ್’ ಗೆ ಹೋಗುವ ರಸ್ತೆಗೆ ಮಣ್ಣು ಹಾಕಿದೆ. ಅಭಿವೃದ್ಧಿಯನ್ನು ಸಹಿಸದೆ ಇಂತಹ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಈ ಹಿಂದೆ ಪ್ರತಿಮೆ ವಿಚಾರವಾಗಿ ಅಪಪ್ರಚಾರ ಮಾಡಿದ್ದ ಕಾಂಗ್ರೆಸ್ ಇದೀಗ ಹತಾಶೆಯಿಂದ ರಸ್ತೆಗೆ ಮಣ್ಣು ಸುರಿದು ಕಾಮಗಾರಿ ನಡೆಯದಂತೆ ತಡೆಯುವ ಪ್ರಯತ್ನ ನಡೆಸಿದೆ. ಕಾರ್ಕಳದ ಅಭಿವೃದ್ಧಿಯಲ್ಲಿ ಶಾಸಕ ಸುನಿಲ್ ಕುಮಾರ್ ಹೆಸರು ಬರುತ್ತದೆ. ಬಿಜೆಪಿ ಹೆಸರು ಬರುತ್ತದೆ ಅನ್ನುವ ಅಸೂಯೆಯಿಂದ ಇಂತಹ ಕೃತ್ಯ ಮಾಡಿದೆ ‘ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪರಶುರಾಮ ಕಂಚಿನ ಪ್ರತಿಮೆ ನಿರ್ಮಾಣದಲ್ಲಿ ಅಕ್ರಮವಾಗಿದೆ ಅನ್ನುವ ವಿಚಾರವನ್ನು ಮುಂದಿಟ್ಟುಕೊಂಡು ಶಕ್ತಿಮೀರಿ ಸುನಿಲ್ ಕುಮಾರ್ ಸೋಲಿಗೆ ಶ್ರಮಿಸಿತ್ತು. ಆದರೆ ಅಲ್ಲಿನ ಜನ ಸುನಿಲ್ ಕುಮಾರ್ ಕೈ ಬಿಡದೆ ಮತ್ತೆ ಗೆಲ್ಲಿಸಿದ್ದರು ಅನ್ನೋದನ್ನು ಇಲ್ಲಿ ಸ್ಮರಿಸಬಹುದಾಗಿದೆ.