ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಸಂಪಾಜೆ ಸಮೀಪದ ಗೂನಡ್ಕ ಎಂಬಲ್ಲಿ ಭಾನುವಾರ (ಮೇ5) ಸಂಜೆ ಬೆತ್ತಲೆಯಾಗಿ ರಸ್ತೆಯಲ್ಲೆಲ್ಲ ಓಡಾಡಿದವನನ್ನು ಪೊಲೀಸರು ಲಾರಿ ಹತ್ತಿಸಿ ಮಡಿಕೇರಿ ಕಡೆಗೆ ಕಳಿಸಿರುವುದಾಗಿ ತಿಳಿದು ಬಂದಿದೆ. ಮಾತ್ರವಲ್ಲ ಆತನ ಆರೋಗ್ಯ ತಪಾಸಣೆ ನಡೆಸಿ, ಊಟ ಕೊಟ್ಟು , ಒಂದಷ್ಟು ಹಣವನ್ನೂ ನೀಡಿ ಆತನನ್ನು ಕಳಿಸಿಕೊಡಲಾಗಿದೆ.
ಭಾನುವಾರ ಸಂಜೆ ಮೈಮೇಲಿದ್ದ ಬಟ್ಟೆಯನ್ನು ಕೈನಲ್ಲಿ ಹಿಡಿದುಕೊಂಡು ವಿವಸ್ತ್ರನಾಗಿ ಗೂನಡ್ಕ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಟ ನಡೆಸುತ್ತಿದ್ದ. ಈ ವೇಳೆ ಸ್ಥಳೀಯರು ಆತನನ್ನು ಹಿಡಿದು ಬಟ್ಟೆ ಧರಿಸುವಂತೆ ತಿಳಿಸಿದ್ದಾರೆ. ಆದರೆ ಆತ ಅದಕ್ಕೆ ಒಪ್ಪುವುದೇ ಇಲ್ಲ. ಹಾಗೆಯೇ ರಸ್ತೆಯಲ್ಲಿ ನಡೆದುಕೊಂಡು ಮುಂದಕ್ಕೆ ಹೋಗುತ್ತಾನೆ. ತಕ್ಷಣ ಕಲ್ಲುಗುಂಡಿ ಹೊರಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗುತ್ತಿದೆ. ಅದರಂತೆ ಪೊಲೀಸರು ಬಂದು ಆತನನ್ನು ವಿಚಾರಿಸಿದ್ದಾರೆ. ಈ ವೇಳೆ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದೆ. ಬಳಿಕ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಬಿಪಿ ತಪಾಸಣೆ ನಡೆಸಲಾಗುತ್ತದೆ. ಪೊಲೀಸರೇ ಊಟ ಕೊಡಿಸಿ, ಸ್ವಲ್ಪ ಹಣ ಕೈಗೆ ಕೊಟ್ಟು ನಿನಗೆ ಯಾವ ಕಡೆಗೆ ಹೋಗಬೇಕು ಎಂದು ಕೇಳಿದ್ದಾರೆ. ಆತ ಮಡಿಕೇರಿ ಕಡೆಗೆ ಕೈ ತೋರಿಸಿದ್ದರಿಂದ ಆತನನ್ನು ಮಡಿಕೇರಿಯತ್ತ ತೆರಳುತ್ತಿದ್ದ ಲಾರಿಯೊಂದರಲ್ಲಿ ಹತ್ತಿಸಿ ಕಳಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.