ನ್ಯೂಸ್ ನಾಟೌಟ್: ಬಾಲಿವುಡ್ ನ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ನಮಗೆಲ್ಲರಿಗೂ ಗೊತ್ತು. ಎಂ. ಎಸ್. ಧೋನಿ ಸಿನಿಮಾದಲ್ಲಿ ಅತ್ಯದ್ಭುತ ನಟನೆಯ ಮೂಲಕ ನಮ್ಮೆಲ್ಲರ ಗಮನ ಸೆಳೆದವರು. ಅವರ ನಿಗೂಢ ಸಾವಿನ ಬಗ್ಗೆ ಇನ್ನೂ ಹಲವಾರು ಅನುಮಾನಗಳು ಕಾಡುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಇನ್ನಷ್ಟು ಬಿಗಿಯಾಗಿ ನಡೆಯಬೇಕೆಂಬ ಕಾರಣಕ್ಕೆ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ನ್ಯಾಯಕ್ಕಾಗಿ ಆನ್ಲೈನ್ ಅಭಿಯಾನವನ್ನು ಆರಂಭಿಸಿದ್ದಾರೆ.
ಈ ಬಗ್ಗೆ ಇನ್ಸ್ಟಾದಲ್ಲಿ ‘ನ್ಯಾನಿ 4 ಎಸ್ಎಸ್ಆರ್ ಜಾನ್ ಆಂದೋಲನ್’ (Nany 4 SSR Jan Andolan) ಎಂದು ಘೋಷಿಸಿದ್ದಾರೆ. ಈ ಅಭಿಯಾನದ ಭಾಗವಾಗಿ, ಪ್ರತಿಯೊಬ್ಬರೂ ತಮ್ಮ ಮಣಿಕಟ್ಟಿಗೆ ಅಥವಾ ಹಣೆಯ ಮೇಲೆ ಕೆಂಪು ಬಟ್ಟೆಯನ್ನು ಕಟ್ಟಿಕೊಳ್ಳಬೇಕೆಂದು ಶ್ವೇತಾ ಒತ್ತಾಯಿಸಿದ್ದಾರೆ. ಜತೆಗೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ನಟನಿಗೆ ನ್ಯಾಯ ನೀಡುವಂತೆ ವಿನಂತಿಸಿದ್ದಾರೆ, ಪೋಸ್ಟ್ನ ಶೀರ್ಷಿಕೆಯಲ್ಲಿ ʻʻಸಿಬಿಐ ತನಿಖೆಯನ್ನು ಇನ್ನಷ್ಟು ಕಠಿಣಗೊಳಿಸಬೇಕು. ಮತ್ತು ಸತ್ಯವನ್ನು ಬಯಲಿಗೆ ತರಬೇಕುʼʼʼಎಂದು ಆಗ್ರಹಿಸಿದ್ದಾರೆ.
ಪೋಸ್ಟ್ ಜತೆಗೆ ಶ್ವೇತಾ ಸಿಂಗ್ ಕೀರ್ತಿ ಈ ರೀತಿ ಬರೆದುಕೊಂಡಿದ್ದಾರೆ. ʻಸುಶಾಂತ್ ಮರಣವಾಗಿ 4 ವರ್ಷಗಳು ಕಳೆದಿವೆ. ವಿಚಾರಣೆಯನ್ನು ತ್ವರಿತಗೊಳಿಸುವಂತೆ ಮತ್ತು ಸತ್ಯವನ್ನು ಬಯಲಿಗೆ ತರುವಂತೆ ನಾನು ಸಿಬಿಐಗೆ ಮನವಿ ಮಾಡುತ್ತೇನೆ. ನಾವು ಒಗ್ಗಟ್ಟಿನಿಂದ ಒಟ್ಟಿಗೆ ನಿಲ್ಲೋಣ. ನಿಮ್ಮ ಮಣಿಕಟ್ಟಿಗೆ ಅಥವಾ ಹಣೆಯ ಮೇಲೆ ಕೆಂಪು ಬಟ್ಟೆಯನ್ನು ಕಟ್ಟಿಕೊಳ್ಳಿ, ಆ ಕ್ಷಣಗಳನ್ನು ಸೆರೆಹಿಡಿಯಿರಿ ಮತ್ತು #Nyay4SSRJanAndolan ಹ್ಯಾಷ್ ಟ್ಯಾಗ್ ಬಳಿಸಿ ವಿಡಿಯೊ ಶೇರ್ ಮಾಡಿʼʼಎಂದು ಬರೆದುಕೊಂಡಿದ್ದಾರೆ.
ಪೋಸ್ಟ್ ಹಂಚಿಕೊಂಡ ನಂತರ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಸುಶಾಂತ್ ಸಿಂಗ್ ರಜಪೂತ್ ಅವರಿಗೆ ನ್ಯಾಯ ಸಿಗಬೇಕು. ನಾವು ನಿಮ್ಮೊಂದಿಗಿದ್ದೇವೆʼʼಎಂದು ಒಬ್ಬರು ಬರೆದಿದ್ದಾರೆ. “4 ವರ್ಷಗಳು ಕಳೆದೇ ಹೋಯ್ತು. ಈ ಪ್ರಕರಣ ನಿನ್ನೆ ಮೊನ್ನೆ ಆದಂತೆ ಭಾಸವಾಗುತ್ತಿದೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.