ನ್ಯೂಸ್ ನಾಟೌಟ್ : ಲೋಕಸಭಾ ಚುನಾವಣೆಯ ದ.ಕ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಮಂಗಳೂರಿನ ಬಜ್ಪೆ ಕೆಂಜಾರು ಕಪಿಲಾ ಪಾರ್ಕ್ ಗೋಶಾಲೆಗೆ ಭೇಟಿ ನೀಡಿದರು.ಈ ವೇಳೆ ಗೋವುಗಳ ಪರಿಸ್ಥಿತಿ ಕಂಡು ಮರುಕ ವ್ಯಕ್ತ ಪಡಿಸಿದರು.
ಇಲ್ಲಿ ಗೋವುಗಳಿಗೆ ನಿಲ್ಲಲು ಜಾಗವಿಲ್ಲದೇ ಒಂದರ ತಲೆ ಇನ್ನೊಂದು ಗೋವಿನ ಮೇಲೆ ಇರುವಂತೆ ಆಹಾರ ಮೇಯುತ್ತಿದ್ದ ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದರು.ಈ ವೇಳೆ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಸಂಬಂಧಪಟ್ಟ ಅಧಿಕಾರಿ ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಗೋಶಾಲೆಯಲ್ಲಿ ಸುಮಾರು ೫೦೦ಕ್ಕೂ ಅಧಿಕ ಸಂಖ್ಯೆಯ ಗೋವುಗಳಿದ್ದು, ಸಣ್ಣ ಹಟ್ಟಿಯಲ್ಲಿ ಅವುಗಳಿಗೆ ನಿಲ್ಲಲು ಆಗದೇ , ಇತ್ತ ಮಲಗಲು ಆಗದೇ ಅದರ ಸ್ಥಿತಿ ದಯನೀಯವಾಗಿದೆ.ಇನ್ನು ಮೇಯೋದಕ್ಕೆ ಹೊರಗಡೆ ಬಿಡೋಣವೆಂದರೆ ಯೋಗ್ಯವಾದ ಜಾಗವೇ ಇಲ್ಲ. ಗೋವುಗಳು ಆರೋಗ್ಯಪೂರ್ಣವಾಗಿ ಇರಲಿ ಎಂದು ಬಯಸಿದರೆ ಒಟ್ಟು ೩೬ ಸೆಂಟ್ಸ್ ಜಾಗದಲ್ಲಿ ಅವುಗಳ ಆರೋಗ್ಯ ಕಾಪಾಡುವುದೇ ದೊಡ್ಡ ಸವಾಲಾಗಿದೆ.ಇನ್ನು ಎಳೆ ಕರುಗಳ ಪಾಡಂತು ಹೇಳತೀರದಾಗಿದೆ.
ಗೋಶಾಲೆಯ ಪ್ರಕಾಶ್ ಅವರು ಗೋಶಾಲೆಯ ಪರಿಸ್ಥಿತಿ ಬಗ್ಗೆ ವಿವರಿಸಿದರು. ಹಿಂದೂ ಪ್ರತಿಪಾದಕರು ಎಂದು ಹೇಳಿಕೊಂಡವರು ಭರವಸೆ ನೀಡಿದ್ದು ಬಿಟ್ಟರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡರು.