ನ್ಯೂಸ್ ನಾಟೌಟ್: ಓಸಿ ಆಡಿಸಲು ಅನುಮತಿಗೆ ಮಾಮೂಲಿ ರೂಪದಲ್ಲಿ ₹1 ಲಕ್ಷ ಲಂಚ ಪಡೆಯುತ್ತಿದ್ದ ಶಿವಮೊಗ್ಗದ ಸಿಇಎನ್ ಠಾಣೆಯ ಸಹಾಯಕ ಸಬ್ ಇನ್ಸ್ಟೆಕ್ಟರ್ ಮೊಹಮ್ಮದ್ ರೆಹಮಾನ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ಶುಕ್ರವಾರ (ಎ.5 ರಂದು ನಡೆದಿದೆ.
ಶಿವಮೊಗ್ಗದ ಆರ್ ಎಂಎಲ್ ನಗರದ ನಿವಾಸಿ ರಫೀಕ್ ಎಂಬುವವರಿಗೆ ಮಾಮೂಲಿ ರೂಪದಲ್ಲಿ ಮಾಸಿಕ ₹1.20 ಲಕ್ಷ ಹಣ ಕೊಡುವಂತೆ ಮೊಹಮ್ಮದ್ ರೆಹಮಾನ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಲ್ಲಿ ₹ 1 ಲಕ್ಷ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ರೆಹಮಾನ್ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವುದನ್ನು ಖಾತರಿಪಡಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿಯಲು ಸಿದ್ಧತೆ ನಡೆಸಿದ್ದರು.
ಶಿವಮೊಗ್ಗದ ಲೋಕಾಯುಕ್ತ ಹಾಗೂ ಸ್ಥಳೀಯ ಪೊಲೀಸರು ಮೊಹಮ್ಮದ್ ರೆಹಮಾನ್ ಗೆ ಪರಿಚಯವಿದ್ದ ಕಾರಣ ಚಿತ್ರದುರ್ಗದಿಂದ ಬಂದಿದ್ದ ಎಸ್ಪಿ ವಾಸುದೇವರಾಮ್ ನೇತೃತ್ವದ ಲೋಕಾಯುಕ್ತ ಪೊಲೀಸರು ಪಂಚೆ-ಬನಿಯನ್ ತೊಟ್ಟು ಹಮಾಲಿಗಳ ವೇಷದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು ಎನ್ನಲಾಗಿದೆ. ಇಲ್ಲಿನ ಜಯನಗರ ಪೊಲೀಸ್ ಠಾಣೆ ಕಟ್ಟಡದಲ್ಲಿರುವ ಸಿಇಎನ್ ಠಾಣೆಯ ಬಳಿ ಕಾದು ನಿಂತಿದ್ದ ಲೋಕಾಯುಕ್ತ ಪೊಲೀಸರು, ನಿಗದಿಯಂತೆ ಠಾಣೆಯ ಬಳಿ ರೆಹಮಾನ್ ದೂರುದಾರ ರಫೀಕ್ ಅವರಿಂದ ಲಂಚದ ಮೊತ್ತ ಪಡೆಯುವಾಗ ದಾಳಿ ನಡೆಸಿ ಹಣದ ಸಮೇತ ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.