ನ್ಯೂಸ್ ನಾಟೌಟ್: ಪ್ಯಾರಾ ಈಜು ಪಟು ಬೆಂಗಳೂರಿನ ನಿರಂಜನ್ ಮುಕುಂದ್ ನಾರ್ವೆಯಲ್ಲಿ ನಡೆದಿರುವ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ನಾಲ್ಕು ಚಿನ್ನದ ಪದಕ ಸೇರಿದಂತೆ ಒಟ್ಟು ಏಳು ಪದಕ ಗೆಲ್ಲುವ ಮೂಲಕ ಭರ್ಜರಿ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಪದಕಗಳ ಗೊಂಚಲನ್ನೇ ಗೆದ್ದ ಹೆಮ್ಮೆಯ ಕನ್ನಡಿಗರಾಗಿ ಮಿಂಚಿದ್ದಾರೆ. ನಿರಂಜನ್ ಮುಕುಂದ್ ಪ್ಯಾರಾ ಈಜು ಪಟುವಾಗಿ ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ಸೇರಿದಂತೆ ವಿಶ್ವದ ಹಲವಾರು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಮಿಂಚಿದ್ದಾರೆ.
ನಿರಂಜನ್ ಅವರ ಬದುಕಿನ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ. ಅವರ ಬದುಕು ನೋವಿನ ಕಿಡಿಯಾಗಿ ಹೊತ್ತಿಕೊಂಡಿತ್ತು. ಅಗ್ನಿ ಜ್ವಾಲೆಯಾಗಿ ಹೊತ್ತಿ ಉರಿದು ಬದುಕನ್ನೇ ಸುಟ್ಟು ಹಾಕುವ ಸ್ಥಿತಿಗೆ ಬಂದು ತಲುಪಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ ಬೆನ್ನು ಹಾಗೂ ಕಾಲಿಗೆ 19 ಸಲ ಶಸ್ತ್ರಚಿಕಿತ್ಸೆಗೆ ನಿರಂಜನ್ ಒಳಗಾದರು. ಹಾಗಂತ ಅವರು ಬದುಕಿನಲ್ಲಿ ಎಂದಿಗೂ ಕೊರಗುತ್ತಾ ಕೂರಲಿಲ್ಲ. ಸತತ ಶಸ್ತ್ರಚಿಕಿತ್ಸೆಗೆ ತನ್ನನ್ನು ತಾನು ಒಡ್ಡಿಕೊಂಡಿದ್ದರೂ ಬದುಕಿನಲ್ಲಿ ಅತ್ಯದ್ಭುತಗಳನ್ನು ಸಾಧನೆ ಮಾಡಿ ತೋರಿಸಿದರು. ಈ ಮೂಲಕ ಬದುಕಿನಲ್ಲಿ ದೃಢ ಸಂಕಲ್ಪ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಅನ್ನೋದನ್ನು ನಿರೂಪಿಸಿದರು. ಸದ್ಯ ಅವರು ಮುಂಬರುವ ಪ್ಯಾರೀಸ್ ಪ್ಯಾರಾ ಒಲಿಂಪಿಕ್ಸ್ ಈಜು ಸ್ಪರ್ಧೆಗೆ ಆಯ್ಕೆಯಾಗುವುದರತ್ತ ಚಿತ್ತ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಅರ್ಹತಾ ಸುತ್ತುಗಳಲ್ಲಿ ಗೆಲ್ಲುವ ಪ್ರಯತ್ನವನ್ನು ನಿರಂಜನ್ ನಡೆಸುತ್ತಿದ್ದಾರೆ. ಹತ್ತು ವರ್ಷದ ಅವರ ಕ್ರೀಡಾ ಜೀವನದಲ್ಲಿ ಬಹುದೊಡ್ಡ ತಿರುವು ಸಿಗುವ ಎಲ್ಲ ಸಾಧ್ಯತೆಗಳು ಕಾಣಿಸುತ್ತಿದೆ. ಮಾತ್ರವಲ್ಲ ಪ್ಯಾರಾ ಈಜು ಪಟುವಾಗಿ ವಿವಿಧ ಕೂಟದಲ್ಲಿ ನೂರು ಅಂತಾರಾಷ್ಟ್ರೀಯ ಪದಕ ಪಡೆದ ಭಾರತದ ಮೊದಲ ಕ್ರೀಡಾಪಟು ಅನ್ನುವ ಸಾಧನೆ ಮಾಡಿದ್ದಾರೆ. ಈ ಬಗ್ಗೆ ತಮ್ಮ ಖುಷಿಯನ್ನು ‘ನ್ಯೂಸ್ ನಾಟೌಟ್’ ಜೊತೆಗೆ ಹಂಚಿಕೊಂಡ ನಿರಂಜನ್, “ಜನ ಇವತ್ತು ನನ್ನನ್ನು ಗುರುತಿಸುತ್ತಿದ್ದಾರೆ. ನಿಮ್ಮನ್ನು ಟೀವಿಯಲ್ಲಿ ನೋಡಿದ್ದೇವೆ. ಪೇಪರ್ ನಲ್ಲಿ ನೋಡಿದ್ದೇವೆ ಎಂದು ಹೇಳುತ್ತಾರೆ. ಆಗೆಲ್ಲ ನನ್ನ ಸಾಧನೆ ಸಾರ್ಥಕ ಅನಿಸುತ್ತೆ” ಎಂದು ತಿಳಿಸಿದರು.