ನ್ಯೂಸ್ ನಾಟೌಟ್: ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರು ನಕ್ಸಲರನ್ನು ಮಂಗಳವಾರ(ಮಾ.19) ಬೆಳಗಿನ ಜಾವ ಕೊಂದು ಹಾಕಿದ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಡೆದಿದೆ. ಇತ್ತ ಛತ್ತೀಸ್ಗಢದ ದಾಂತೇವಾಡ ಅರಣ್ಯ ಪ್ರದೇಶದಲ್ಲಿ ಒಬ್ಬ ನಕ್ಸಲನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಮದು ವರದಿ ತಿಳಿಸಿದೆ .
ಗಡ್ಚಿರೋಲಿ ಕಾರ್ಯಾಚರಣೆಯಲ್ಲಿ ಹತರಾದ ನಕ್ಸಲರನ್ನು ಮಂಗಿ ಇಂದ್ರವೆಲ್ಲಿ ಪ್ರದೇಶ ಸಮಿತಿ ಕಾರ್ಯದರ್ಶಿ ಡಿವಿಸಿಎಂ ವರ್ಗೀಶ್, ಸಿರ್ಪುರ್ ಚೆನ್ನೂರ್ ಪ್ರದೇಶ ಸಮಿತಿ ಕಾರ್ಯದರ್ಶಿ ಡಿವಿಸಿಎಂ ಮಾಗ್ಟು ಹಾಗೂ ಸದಸ್ಯರಾದ ಕುರಸಂಗ್ ರಾಜು, ಕುಡಿಮೆಟ್ಟ ವೆಂಕಟೇಶ್ ಎಂದು ಗುರುತಿಸಲಾಗಿದೆ. ಈ ಎಲ್ಲಾ ನಕ್ಸಲರ ಪತ್ತೆಗೆ ಈ ಹಿಂದೆ 36 ಲಕ್ಷ ರೂ ಬಹುಮಾನ ಘೋಷಿಸಲಾಗಿತ್ತು.
ಲೋಕಸಭೆ ಚುನಾವಣೆ ಹೊತ್ತಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ನಕ್ಸಲರ ತಂಡವೊಂದು ಪ್ರಾಣಹಿತ ನದಿಯ ಮೂಲಕ ತೆಲಂಗಾಣದಿಂದ ಗಡ್ಚಿರೋಲಿ ಜಿಲ್ಲೆ ಪ್ರವೇಶಿಸಿತ್ತು. ಈ ಬಗ್ಗೆ ಗಡ್ಚಿರೋಲಿ ಪೊಲೀಸರಿಗೆ ಸೋಮವಾರ(ಮಾ.೧೮) ಮಧ್ಯಾಹ್ನ ಖಚಿತ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಹೆಚ್ಚವರಿ ಎಸ್ಪಿ ಯತೀಶ್ ದೇಶ್ಮುಖ್ ನೇತೃತ್ವದ ಪೊಲೀಸ್ ವಿಶೇಷ ನಿಗ್ರಹ ಘಟಕ ಸಿ- 60ರ ಹಲವು ತಂಡಗಳು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಕ್ಷಿಪ್ರ ಕಾರ್ಯಪಡೆ ತಂಡಗಳು ಶೋಧಕ್ಕೆ ಇಳಿದವು. ಭದ್ರತಾ ಪಡೆಗಳು ಮಂಗಳವಾರ ಬೆಳಗ್ಗೆ ರೇಪನ್ಪಲ್ಲಿ ಸಮೀಪದ ಕೋಲಮಾರ್ಕ ಬೆಟ್ಟಗಳಲ್ಲಿ ಶೋಧ ನಡೆಸುತ್ತಿದ್ದ ವೇಳೆ ನಕ್ಸಲರು ಗುಂಡಿನ ದಾಳಿ ನಡೆಸಿದರು. ಆಗ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿ ನಕ್ಸಲರನ್ನು ಕೊಂದುಹಾಕಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಎನ್ಕೌಂಟರ್ ಬಳಿಕ ಇಲ್ಲಿನ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.