ನ್ಯೂಸ್ ನಾಟೌಟ್: ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಮತ್ತು ಹಿರಿಯ ಬಿಜೆಪಿ ನಾಯಕ ಡಿ.ವಿ.ಸದಾನಂದ ಗೌಡ ಅವರು ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸುತ್ತಾರಾ ಎನ್ನುವ ಪ್ರಶ್ನೆ ಹರಿದಾಡುತ್ತಿದೆ. ನನ್ನ ನಿರ್ಧಾರವನ್ನು ನಾಳೆ ಪ್ರಕಟಿಸುವೆ ಎಂದು ಡಿವಿಎಸ್ ನಿನ್ನೆ ಹೇಳಿದ್ದರು.ನಿನ್ನೆ ಅವರ ಹುಟ್ಟುಹಬ್ಬದಂದು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ನಾಳೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದರು.ಇದೀಗ ಎಲ್ಲರ ಚಿತ್ತ ಡಿವಿಎಸ್ ಅವರ ನಿರ್ಧಾರದತ್ತ ನೆಟ್ಟಿದೆ.
ನಿಮ್ಗೆ ತಿಳಿದಿರುವಂತೆ ಕೆಲವು ತಿಂಗಳ ಹಿಂದೆಯಷ್ಟೇ ದೆಹಲಿಯ ನಾಯಕರನ್ನು ಭೇಟಿಯಾಗಿದ್ದ ಸದಾನಂದ ಗೌಡ್ರು, ಬೆಂಗಳೂರಿಗೆ ಬಂದು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಹೇಳಿದ್ದರು. ಇದಾದ ನಂತರದ ದಿನಗಳಲ್ಲಿ ಅದೇನು ರಾಜ್ಯ ಬಿಜೆಪಿಯಲ್ಲಿ ವಿದ್ಯಮಾನ ನಡೆಯಿತೋ, ನಾನು ಕೂಡಾ ಟಿಕೆಟ್ ಆಕಾಂಕ್ಷಿ ಎಂದು ಡಿವಿಎಸ್ ಹೇಳಿದರು.ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬಹುತೇಕ ಮತ್ತೆ ಸದಾನಂದ ಗೌಡ್ರೇ ಅಭ್ಯರ್ಥಿ ಎಂದೇ ಬಿಂಬಿತವಾಗಿತ್ತು. ಆದರೆ, ಯಾವಾಗ ಶೋಭಾ ಕರಂದ್ಲಾಜೆಗೆ ಉಡುಪಿ ಚಿಕ್ಕಮಗಳೂರು ಸೀಟ್ ತಪ್ಪಿ, ಅವರನ್ನು ಬೆಂಗಳೂರಿನಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿತೋ, ಅಲ್ಲಿಗೆ ಗೌಡ್ರ ಚುನಾವಣಾ ಸ್ಪರ್ಧೆಯ ಕನಸು ನುಚ್ಚುನೂರಾಯಿತು.ಆದರೆ, ಈ ವಿದ್ಯಮಾನಗಳಿಂದ ತೀವ್ರವಾಗಿ ಬೇಸತ್ತ ಸದಾನಂದ ಗೌಡ್ರು, ಬಿಜೆಪಿಯ ವಿರುದ್ದ ಗುಡುಗಿದ್ದಾರೆ. ನನಗೆ ಬಿಜೆಪಿಯಲ್ಲಿ ಅವಮಾನವಾಗಿದೆ ಎಂದು ಬಹಿರಂಗವಾಗಿ ಹೇಳಲು ಆರಂಭಿಸಿದರೋ, ಕಾಂಗ್ರೆಸ್ ನಾಯಕರು ಅವರನ್ನು ಸಂಪರ್ಕಿಸಿ ಟಿಕೆಟ್ ಆಫರ್ ನೀಡಿದ್ದಾರೆ ಎನ್ನಲಾಗಿದೆ.
ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿಯು ಯುವರಾಜ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಿದೆ. ಇನ್ನು, ಕಾಂಗ್ರೆಸ್ಸಿನಿಂದ ವಕ್ತಾರ ಲಕ್ಷ್ಮಣ್ ಅವರ ಹೆಸರೇ ಬಹುತೇಕ ಮುನ್ನಲೆಯಿತ್ತು. ಆದರೆ, ಸದಾನಂದ ಗೌಡ್ರು, ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರಿಂದ, ಗೌಡ್ರಿಗೆ ಮೈಸೂರು ಟಿಕೆಟ್ ಆಫರ್ ನೀಡಲಾಗಿದೆ ಎನ್ನುವ ಸುದ್ದಿಯಿದೆ.ಒಕ್ಕಲಿಗ ಸಮುದಾಯದ ಮತಗಳು ಮೈಸೂರು ಭಾಗದಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ ಗೌಡ್ರು ಅಲ್ಲಿಂದ ಸ್ಪರ್ಧಿಸಿದರೂ ಆಶ್ಚರ್ಯವಿಲ್ಲ. ಈ ನಡುವೆ, ಸದಾನಂದ ಗೌಡ್ರ ಹೆಸರು ಉಡುಪಿ ಚಿಕ್ಕಮಗಳೂರಿನಿಂದಲೂ ಕೇಳಿ ಬರುತ್ತಿದೆ. ಪಕ್ಕದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ತುಳು ಮೂಲದವರಾಗಿರುವುದರಿಂದ ಗೌಡ್ರು ಹೆಸರು ಅಲ್ಲಿಂದಲೂ ಕೇಳಿ ಬರಲಾಂಭಿಸಿದೆ. ಆದರೆ, ಸದಾನಂದ ಗೌಡ್ರ ಎಕ್ಸ್ ಖಾತೆಯ ಟ್ಯಾಗ್ ಲೈನ್ ನಲ್ಲಿ ’ಮೋದಿ ಕಾ ಪರಿವಾರ್’ ಎನ್ನುವುದು ಈಗಲೂ ಇದೆ.ಅಂತು ಇಂತು ಗೌಡರ ಮುಂದಿನ ನಡೆಯತ್ತ ಕುತೂಹಲದ ಕಣ್ಣುಗಳಿಂದ ಜನ ನೋಡುತ್ತಿದ್ದಾರೆ.