ನ್ಯೂಸ್ ನಾಟೌಟ್: ಅಕ್ರಮ ಚಟುವಟಿಕೆ ಆರೋಪ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ನಗರ ಪೊಲೀಸರು ಇಂದು (ಮಾರ್ಚ್ 31) ಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಅಕ್ರಮ ಚಟುವಟಿಕೆಗಳನ್ನು ತಟೆಗಟ್ಟುವ ನಿಟ್ಟಿನಲ್ಲಿ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಬೆಳಂಬೆಳಗ್ಗೆ ಹಿಂಡಲಗಾ ಜೈಲಿನ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಡಿಸಿಪಿಗೆ ನಗರದ ಐದೂ ವಿಭಾಗದ ಎಸಿಪಿಗಳು ಸಾಥ್ ನೀಡಿದ್ದಾರೆ. ಕೈದಿಗಳು ಮೊಬೈಲ್ ಫೋನ್, ಟಿವಿ ಬಳಸುತ್ತಿದ್ದಾರೆ ಎನ್ನುವ ಆರೋಪ ಇತ್ತೀಚೆಗೆ ಕೇಳಿ ಬಂದ ಹಿನ್ನೆಲೆ ನಗರ ಪೊಲೀಸ್ ಉಪ ಆಯುಕ್ತ ರೋಹನ್ ಜಗದೀಶ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು. ಒಂದು ಗಂಟೆಗೂ ಅಧಿಕ ಸಮಯ ಶ್ವಾನದಳದ ನೆರವಿನೊಂದಿಗೆ ಕಾರಾಗೃಹದಲ್ಲಿ ತಪಾಸಣೆ ಮಾಡಲಾಯಿತು. ಈ ವೇಳೆ ಮೊಬೈಲ್ ಚಾರ್ಜರ್, ಬ್ಲ್ಯೂಟೂಥ್ ಡಿವೈಸ್, ತಂಬಾಕು, ಸಿಗರೇಟ್ ಪ್ಯಾಕ್ಗಳು ಸಿಕ್ಕಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.