ನ್ಯೂಸ್ ನಾಟೌಟ್: ಲೋಕಸಭೆ ಚುನಾವಣೆಗೆ (Lok Sabha Election) ದಿನಗಣನೆ ಶುರುವಾಗಿದ್ದು, ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು- (Candidates List) ಹಂತ ಹಂತವಾಗಿ ಘೋಷಣೆ ಮಾಡುತ್ತಿವೆ. ಈ ಪ್ರಯುಕ್ತ ಕಾಂಗ್ರೆಸ್ 4ನೇ ಪಟ್ಟಿಯನ್ನು ರಿಲೀಸ್ ಮಾಡಿದೆ.ಅಚ್ಚರಿಯೆಂದರೆ ಕರ್ನಾಟಕದಲ್ಲಿ (Karnataka) ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಸಸಿಕಾಂತ್ ಸೆಂಥಿಲ್ಗೆ (Sasikant Senthil) ಟಿಕೆಟ್ ನೀಡಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಸೆಂಥಿಲ್ಗೆ ಈ ಬಾರಿ ತಿರುವಳ್ಳೂರು ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ.
ಏಪ್ರಿಲ್ 19ರಂದು ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಘೋಷಣೆಗೆ ಕಾರ್ಯೋನ್ಮುಖವಾಗಿವೆ.
ಮೂಲತಃ ಇವರು ತಮಿಳುನಾಡಿನವರು.ಸಸಿಕಾಂತ್ ಸೆಂಥಿಲ್ ಮಾಜಿ ಐಎಎಸ್ ಅಧಿಕಾರಿ. 2009ನೇ ಬ್ಯಾಚ್ನ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದರು. ಇವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 9ನೇ ರ್ಯಾಂಕ್ ಗಳಿಸಿ ,ಬಳ್ಳಾರಿ ಜಿಲ್ಲೆಯಲ್ಲಿ 2009 ರಿಂದ 2012 ರವರೆಗೆ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದರು.ನಂತರ ಎರಡು ಅವಧಿಗೆ ಶಿವಮೊಗ್ಗ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಾಗೂ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದರು.
ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ವಾರ್ ರೂಂ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿಯೂ ಪಕ್ಷದ ಸಾಮಾಜಿಕ ಜಾಲತಾಣಗಳ ಉಸ್ತುವಾರಿಯಾಗಿದ್ದರು. ಅಲ್ಲದೆ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ರೂಪಿಸುವುದರ ಹಿಂದೆ ಸಸಿಕಾಂತ್ ಸೆಂಥಿಲ್ರ ಪಾತ್ರ ಪ್ರಮುಖವಾಗಿತ್ತು ಹೇಳಲಾಗಿದೆ. ಜೊತೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಗ್ಯಾರಂಟಿ ಯೋಜನೆ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸೆಂಥಿಲ್ ಕುಮಾರ್ ಕರ್ನಾಟಕದಲ್ಲಿ ಕೆಲಸ ಮಾಡಿ ಲೋಕಸಭೆಗೆ ಸ್ಪರ್ಧಿಸುತ್ತಿರುವ 2ನೇ ಅಧಿಕಾರಿ. ಇದಕ್ಕೂ ಮುನ್ನ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈಗೆ ಬಿಜೆಪಿ ಟಿಕೆಟ್ ನೀಡಿದೆ. ಅವರು ಕೊಯಮತ್ತೂರಿನಿಂದ ಸ್ಪರ್ಧಿಸುತ್ತಿದ್ದಾರೆ.