ನ್ಯೂಸ್ ನಾಟೌಟ್ : ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಘೋಷಣೆ ಬೆನ್ನಲ್ಲೇ ಇದೀಗ ಬಿಜೆಪಿ ಪಕ್ಷಕ್ಕೆ ತಲೆನೋವು ಶುರುವಾಗಿದೆ. ಈ ಸಾಲು ಸಾಲು ಸವಾಲಿನಿಂದ ಹೊರಬರೋದು ಹೇಗೆ ಎನ್ನುವ ಚಿಂತೆಯಲ್ಲಿದ್ದ,ಎಲ್ಲವನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.
ಇತ್ತ ಶಿವಮೊಗ್ಗ, ದಾವಣಗೆರೆ, ಬೆಂಗಳೂರು ಉತ್ತರ ಹೀಗೆ ಹಲವು ಲೋಕಸಭಾ ಕ್ಷೇತ್ರದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಸಿಎಂ ಡಿ.ವಿ ಸದಾನಂದಗೌಡ ಬೇಸರ ವ್ಯಕ್ತಪಡಿಸಿದ್ದರು. ತಮ್ಮ ನಿರ್ಧಾರವನ್ನು ಬಹಿರಂಗ ಪಡಿಸುವುದಾಗಿ ತಿಳಿಸಿದ್ದರು.ಈ ಹಿನ್ನಲೆಯಲ್ಲಿ ಡಿ.ವಿ ಸದಾನಂದಗೌಡರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿದ್ದರು. ಕಾಂಗ್ರೆಸ್ ಪಕ್ಷ ಸೇರುವ ಆಫರ್ ಅನ್ನು ನೀಡಲಾಗಿತ್ತು. ಡಿವಿಎಸ್ ಅವರನ್ನು ಕಾಂಗ್ರೆಸ್ ಸಂಪರ್ಕ ಮಾಡಿದ್ದ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಡಿ.ವಿ ಸದಾನಂದಗೌಡರಿಗೆ ಅಸಮಾಧಾನದ ಬಗ್ಗೆ ಬಿಜೆಪಿ ಉನ್ನತ ಮೂಲಗಳಿಂದ ಮಹತ್ವದ ಮಾಹಿತಿ ಸಿಕ್ಕಿದೆ.
ಡಿ.ವಿ ಸದಾನಂದಗೌಡರನ್ನು ಕಾಂಗ್ರೆಸ್ ನಾಯಕರು ಸಂಪರ್ಕಿಸಿದ ಮೇಲೆ RSS ನಾಯಕರು ಅಲರ್ಟ್ ಆಗಿದ್ದಾರೆ. ಕಾಂಗ್ರೆಸ್ ಪಕ್ಷ ಸೇರುವ ಆಫರ್ ಬೆನ್ನಲ್ಲೇ RSS ನಾಯಕರು ಮಧ್ಯಸ್ಥಿಕೆ ವಹಿಸಿದ್ದು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.ಸದ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗ್ತಿದೆ ಅಂತ ಹೇಳೋದಿಲ್ಲ. ನಿಮ್ಮ ಪ್ರಕರಣದಲ್ಲಿ ನಿಮ್ಮ ಹಿತವನ್ನ ಕಾಪಾಡಲು ಬದ್ಧರಿದ್ದೇವೆ. ಪಕ್ಷ ತ್ಯಜಿಸುವಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಬಿಜೆಪಿಯಲ್ಲಿ ಇವತ್ತಿನ ವಾತಾವರಣ ಸರಿ ಹೋಗಬೇಕಿದೆ. ಹಿರಿಯ ನಾಯಕರನ್ನ ಕಡೆಗಣನೆ ಮಾಡೋದು ಸರಿಯಲ್ಲ ಎಂದು ಆರ್ಎಸ್ಎಸ್ ನಾಯಕರು ಹೇಳಿದ್ದಾರೆ. RSS ನಾಯಕರು ಮಧ್ಯಸ್ಥಿಕೆಗೆ ಡಿ.ವಿ ಸದಾನಂದಗೌಡರು ಮಣಿದಿದ್ದು, ಕಾಂಗ್ರೆಸ್ ಪಕ್ಷ ಸೇರುವ ಆಫರ್ ಅನ್ನು ತಿರಸ್ಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದಲ್ಲದೇ ಈ ಎಲ್ಲ ಬೆಳವಣಿಗೆಯಲ್ಲಿ ಎರಡು ಮೂರು ದಿನಗಳಿಂದ ಗುಡುಗುತ್ತಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಣ್ಣಗಾ ಗಿದ್ದು, ಮುಜುಗರ ತಪ್ಪಿಸಿಕೊಳ್ಳಲು ಬೆಂಗಳೂರಿನಿಂದ ತವರು ನೆಲ ಸುಳ್ಯಕ್ಕೆ ತೆರಳಿದ್ದಾರೆ ಎನ್ನುವ ಮಾಹಿತಿಯಿದೆ.ಸುಳ್ಯದ ಮೂಲಮನೆಯಾದ ದೇವರಗುಂಡದಲ್ಲಿ ದೈವ ಕೋಲ ಇರುವ ಹಿನ್ನೆಲೆಯಲ್ಲಿ ತೆರಳಿದ್ದು, ತಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಬಯಸಿ ದೈವಕ್ಕೆ ಮೊರೆ ಇಟ್ಟಿದ್ದಾರೆ ಎಂದೂ ಹೇಳಲಾಗಿದೆ.
ದೈವ ಕೋಲ ಮುಗಿಸಿ ಶುಕ್ರವಾರದ ಬಳಿಕ ಮತ್ತೆ ಬೆಂಗಳೂರಿಗೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದ್ದು, ದೇವರಗುಂಡದಲ್ಲಿರುವ ತಮ್ಮ ಕುಟುಂಬಸ್ಥರೊಂದಿಗೆ ಚರ್ಚಿಸಿ ರಾಜಕೀಯ ನಿರ್ಧಾರ ಕೈಗೊಳ್ಳಲು ಆಗಮಿಸುತ್ತಿರುವುದಾಗಿ ತಿಳಿದುಬಂದಿದೆ. ಗುರುವಾರ ಬೆಳಗ್ಗೆ ಅವರ ರಾಜಕೀಯದ ಮುಂದಿನ ನಡೆ ಬಗ್ಗೆ ನಿರ್ಧಾರದ ಸ್ಪಷ್ಟ ಮಾಹಿತಿ ಸಿಗುವ ನಿರೀಕ್ಷೆಯಿದೆ.