ನ್ಯೂಸ್ ನಾಟೌಟ್ : ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇದೀಗ ಮಿಕ್ಸಿ, ಕುಕ್ಕರ್, ಫ್ಯಾನ್, ನಾನ್ಸ್ಟಿಕ್ ತವಾದಂತಹ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಕೆಲ ಕ್ಷೇತ್ರಗಳಲ್ಲಿ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಲೋಡ್ಗಟ್ಟಲೆ ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹಿಸಿಟ್ಟು ಕೊಂಡಿದ್ದು, ದಿನಾಂಕ ನಿಗದಿಯಾಗುತ್ತಿದ್ದಂತೆ ವಿತರಣೆ ಕಾರ್ಯ ಆರಂಭಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದೀಗ ಚುನಾವಣೆಯ ಪ್ರಚಾರದ ವೇಳೆ ತಮಗೆ ಕುಕ್ಕರ್ ನೀಡದೆ ಇರುವುದನ್ನು ಪ್ರಶ್ನಿಸಿದ ವೃದ್ಧೆಯೊಬ್ಬರ ಮೇಲೆ ಕಾಂಗ್ರೆಸ್ ಮುಖಂಡ ಅಮಾನುಷವಾಗಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗದ ಉಜ್ಜನಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದವರನ್ನು ಗಂಗಮ್ಮ (75) ಎಂದು ಗುರುತಿಸಲಾಗಿದೆ.ಕಾಂಗ್ರೆಸ್ ಕಾರ್ಯಕರ್ತ ನಾರಾಯಣ್ ಎಂಬಾತ ವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ ಗಾಯಾಳುವಿಗೆ ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಹಲ್ಲೆಯ ಸಂಬಂಧ ಹಲ್ಲೆಗೊಳಗಾದ ಗಂಗಮ್ಮ ದೂರು ದಾಖಲಿಸಿದ್ದಾರೆ.