ನ್ಯೂಸ್ ನಾಟೌಟ್ : ಕಳೆದ 21 ವರ್ಷದಿಂದ ಭೂಗತನಾಗಿ ನಕ್ಸಲ್ (Naxalite) ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಮೋಸ್ಟ್ ವಾಂಟೆಂಡ್ ನಕ್ಸಲ್ ಇದೀಗ ಸಿಕ್ಕಿ ಬಿದ್ದಿದ್ದಾನೆ. ಇದಕ್ಕೆ ಕಾರಣವಾಗಿದ್ದು ಒಂದು ಕಾಡಾನೆ ಎಂದರೆ ನಿಮಗೂ ಅಚ್ಚರಿಯಾದಿರದು.ಹಾಗಾದರೆ ಅದೆಲ್ಲಿ?ಈತ ತಪ್ಪಿಸಿಕೊಂಡು ಇಷ್ಟು ಸಮಯ ಎಲ್ಲಿದ್ದ ಅನ್ನೋದರ ಡಿಟೇಲ್ಸನ್ನು ಕೊಡ್ತೀವಿ ಓದಿ..
ಅಂಗಡಿ ಸುರೇಶ್ ಈತನ ಹೆಸರು.ಒಂದು ಕಾಡಾನೆಯಿಂದ ಪೊಲೀಸರಿಗೆ (Police) ಸಿಕ್ಕಿಬಿದ್ದ ನಕ್ಸಲ್.ಸುರೇಶ್ ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ (Mudigere) ತಾಲೂಕಿನ ಅಂಗಡಿ ಗ್ರಾಮದವನು. 2003ರಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಸುರೇಶ್ ಕಳೆದ 21 ವರ್ಷಗಳಿಂದ ನಾಪತ್ತೆಯಾಗಿದ್ದ. ಪೊಲೀಸರು ಈತನಿಗಾಗಿ ಭಾರಿ ಹುಡುಕಾಟ ನಡೆಸಿದ್ದಾರೆ.ಈತನಿಗಾಗಿ ಹುಡುಕಾಟ ನಡೆಸದ ಸ್ಥಳಗಳೇ ಇಲ್ಲ. ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪೊಲೀಸರು ಈ ಮೋಸ್ಟ್ ವಾಂಟೆಡ್ ನಕ್ಸಲ್ಗಾಗಿ ಹುಡುಕಾಡುತ್ತಿದ್ದರು. ಆದರೆ ಕಳೆದ 21 ವರ್ಷಗಳಿಂದಲೂ ಪೊಲೀಸರ ಕೈಗೆ ಸಿಗದೇ ಈತ ನಾಪತ್ತೆಯಾಗಿದ್ದ.
ನಕ್ಸಲ್ ಸುರೇಶ್ನ ಮೂಲ ಹೆಸರು ಪ್ರದೀಪ್. ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡ ಬಳಿಕ ಸುರೇಶ್ ಎಂದು ಬದಲಿಸಿಕೊಂಡಿದ್ದನು. ಸುರೇಶ್ ಅಲಿಯಾಸ್ ಪ್ರದೀಪ್ ಕರ್ನಾಟಕ ಕೇಡರ್ ನಕ್ಸಲ್ ಆಗಿ ಗುರುತಿಸಿಕೊಂಡಿದ್ದ. ಇವರೆಗೂ ಕರ್ನಾಟಕದಲ್ಲಿ ಒಟ್ಟು 26ಕ್ಕೂ ಹೆಚ್ಚು ಪ್ರಕರಣಗಳು ಸುರೇಶ್ ಮೇಲೆ ದಾಖಲಾಗಿಲಾಗಿತ್ತು.ಆದರೂ ಈತ ಪತ್ತೆಯಾಗಿರಲಿಲ್ಲ.
ಶುಕ್ರವಾರ ವೇಳೆ ಸುರೇಶ್ ತನ್ನ ನಕ್ಸಲ್ ತಂಡದೊಂದಿಗೆ ಕೇರಳದ ಕಣ್ಣೂರಿನ ಕಂಚಿಕೊಲ್ಲಿ ಅರಣ್ಯ ಪ್ರದೇಶದಲ್ಲಿ ಹೋಗುತ್ತಿದ್ದ ವೇಳೆ ಕಾಡಾನೆಗಳು ನಕ್ಸಲರ ಮೇಲೆ ದಾಳಿ ಮಾಡಿವೆ. ಆನೆ ದಾಳಿಯಿಂದ ಸುರೇಶ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಳಿಕ ಆತನನ್ನು ಉಳಿದ ನಕ್ಸಲರು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಗಾಯಗೊಂಡ ಸುರೇಶ್ ನಡೆಯಲಾಗದೇ ಕಾಡಿನಲ್ಲೇ ಇದ್ದ ಎಂದು ವರದಿಯಾಗಿದೆ.ಆತನನ್ನು ಸ್ಥಳೀಯ ಆದಿವಾಸಿಗಳು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಅಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಕೇರಳ ಪೊಲೀಸರು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್ ಅನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ನಕ್ಸಲ್ ಸುರೇಶ್ ಕಣ್ಣೂರಿನ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.