ನ್ಯೂಸ್ ನಾಟೌಟ್ : ಭಾರಿ ಸಂಚಲನ ಮಾಡಿದ್ದ ದಿ ಕೇರಳ ಸ್ಟೋರಿ ಮೂವಿ ಇದೀಗ ಒಟಿಟಿ ಅಂಗಳಕ್ಕೆ ಕಾಲಿಡಲು ಸಜ್ಜಾಗಿದೆ. ಸಿನಿಮಾವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಹೀಗೊಂದು ಶುಭ ಸುದ್ದಿ ನೀಡಿದೆ.
ಹೌದು,ಕಳೆದ ವರ್ಷ ಈ ಚಿತ್ರ ಭಾರಿ ಸಂಚಲನ ಕ್ರಿಯೆಟ್ ಮಾಡಿತ್ತು.ಒಂದಷ್ಟು ಮಂದಿ ಈ ಮೂವಿ ನೋಡಿ ಪರ ವಿರೋಧ ಚರ್ಚೆ ಮಾಡಿದ್ದರು. ಮಾತ್ರವಲ್ಲ ಚಿತ್ರದ ಕುರಿತಂತೆ ನಾನಾ ರೀತಿಯ ವಿಮರ್ಶೆ ಹಲವು ಸಮಯದವರೆಗೆ ಮುಂದುವರಿದಿತ್ತು.ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಕೂಡ ಬಾಚಿ ಕೊಂಡಿದೆ. ಆದರೆ ಈ ಚಿತ್ರ ಬಿಡುಗಡೆಯಾಗುವ ಮುನ್ನ ಅಷ್ಟೊಂದು ಸುಲಭವಾಗಿರಲಿಲ್ಲ.ಏಕೆಂದರೆ ರಿಲೀಸ್ಗೂ ಮುನ್ನ ಅನೇಕ ಕಂಟಕಗಳು ಎದುರಾಗಿದ್ದವು.
ಇದೀಗ ಅದೆಲ್ಲವನ್ನೂ ಮೆಟ್ಟಿ ನಿಂತು ಈಗ ಒಟಿಟಿಗೆ ಈ ಸಿನಿಮಾ ಎಂಟ್ರಿ ನೀಡುತ್ತಿರುವುದು ವಿಶೇಷವಾಗಿದೆ.ಸುದೀಪ್ತೋ ಸೇನ್ ನಿರ್ದೇಶನದ ನಟಿ ಆದಾ ಶರ್ಮಾ ನಟನೆಯ “ದಿ ಕೇರಳ ಸ್ಟೋರಿ” ಜೀ 5 ಪಾಲಾಗಿದ್ದು, ಫೆಬ್ರವರಿ 16ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ವಿವಾದಿತ ಕಥಾವಸ್ತು ಈ ಸಿನಿಮಾದಲ್ಲಿ ಇದೆ ಎಂಬ ಕಾರಣಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣದಿಂದ ಚಿತ್ರದ ಒಟಿಟಿ ರಿಲೀಸ್ ಕೂಡ ತಡವಾಗಿತ್ತು. ಚಿತ್ರಮಂದಿರದಲ್ಲಿ ತೆರೆಕಂಡು ಬರೋಬ್ಬರಿ 9 ತಿಂಗಳು ಕಳೆದ ಬಳಿಕ ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರಕ್ಕೆ ಸಜ್ಜಾಗಿದೆ.
ಸತ್ಯ ಘಟನೆಗಳನ್ನು ಆಧರಿಸಿ ಮಾಡಲಾಗಿದೆ ಎನ್ನಲಾಗಿರುವ “ದಿ ಕೇರಳ ಸ್ಟೋರಿ” ಚಿತ್ರವು ವಿಶ್ವದಾದ್ಯಂತ ಬರೋಬ್ಬರಿ 303 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಸಾಮಾನ್ಯವಾಗಿ ಚಿತ್ರಮಂದಿರದಲ್ಲಿ ಹೀಗೆ ಸೂಪರ್ ಹಿಟ್ ಆದ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಹಲವು ಒಟಿಟಿ ಸಂಸ್ಥೆಗಳು ಮುಗಿಬೀಳುತ್ತವೆ. ವಿವಾದಾತ್ಮಕ ಕಥಾಹಂದರ ಹೊಂದಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದ ಒಟಿಟಿ ಹಕ್ಕುಗಳನ್ನು ಖರೀದಿಸಲು ಯಾವ ಸಂಸ್ಥೆಗಳೂ ಆಸಕ್ತಿ ತೋರಿಸಿರಲಿಲ್ಲ. ಕೇರಳದಲ್ಲಿ ಹಿಂದೂ ಯುವತಿಯರನ್ನು ಮತಾಂತರ ಮಾಡಿ, ನಂತರ ಅವರನ್ನು ಬೇರೆ ರಾಷ್ಟ್ರಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಈ ಚಿತ್ರದ ಕಥಾಹಂದರ. ಸಿನಿಮಾದ ಟೀಸರ್ನಲ್ಲಿ ಅಂಕಿ-ಅಂಶಗಳು ತಪ್ಪಾಗಿದ್ದವು ಮತ್ತು ಘಟನೆಗಳನ್ನು ವೈಭವೀಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದವು ಮತ್ತು ಹಲವು ರಾಜ್ಯಗಳಲ್ಲಿ ಚಿತ್ರದ ಪ್ರದರ್ಶನವನ್ನು ಬ್ಯಾನ್ ಮಾಡಲಾಗಿತ್ತು.ಇದೀಗ ಒಟಿಟಿ ಅಂಗಳಕ್ಕೆ ಎಂಟ್ರಿಯಾಗಿದ್ದು, ಯಾವ ತಿರುವನ್ನು ಪಡೆದುಕೊಳ್ಳುತ್ತೆ ಕಾದು ನೋಡಬೇಕು.