ನ್ಯೂಸ್ ನಾಟೌಟ್ : ಅಕ್ರಮ ಮರಳು ದಂಧೆ ನಿಲ್ಲಿಸಲು ಯತ್ನಿಸಿದಾಗ ಹತ್ಯೆಯಾಗಿದ್ದ ಗ್ರಾಮಾಡಳಿತ ಅಧಿಕಾರಿಯೊಬ್ಬರ ಪುತ್ರ ಇಂದು(ಫೆ.೨೧) ನ್ಯಾಯಾಂಗ ಸೇವೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಿವಿಲ್ ಕೋರ್ಟ್ ನ್ಯಾಯಾಧೀಶರಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ತೂತುಕುಡಿಯ ಏಸುವಾದಿಯಾನ್ ಇಂಥದ್ದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಏಪ್ರಿಲ್ 25, 2023ರಂದು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ವ್ಯಕ್ತಿಗಳ ದಂಧೆಯನ್ನು ನಿಲ್ಲಿಸಲು ಮುಂದಾಗಿದ್ದ ಆತನ ತಂದೆ ಲೌರ್ಡ್ ಫ್ರಾನ್ಸಿಸ್ ಎಂಬವರನ್ನು ಕಳೆದುಕೊಂಡ ಪುತ್ರ ಯೇಸುವಾದಿಯಾನ್, ಇದೀಗ ನ್ಯಾಯಾಂಗ ಸಿವಿಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮುಖೇನ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಈ ಘಟನೆ ನಡೆದು ಹತ್ತು ತಿಂಗಳ ನಂತರ ಯೇಸುವಾದಿಯಾನ್ ತಮಿಳುನಾಡು ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾರೆ. ಈ ಮೂಲಕ ತಮ್ಮ ತಂದೆಯ ಕನಸನ್ನು ನನಸಾಗಿಸಿದ್ದಾರೆ. “ನನ್ನಂತಹ ಯುವಕರು ಕಷ್ಟಪಟ್ಟು ಓದಬೇಕೆಂದು ನಾನು ಬಯಸುತ್ತೇನೆ. ಶಿಕ್ಷಣವು ನಮಗೆ ಜೀವನದಲ್ಲಿ ಉತ್ತಮ ಸ್ಥಾನವನ್ನು ನೀಡುತ್ತದೆ. ನನ್ನ ಕುಟುಂಬ ನನಗೆ ಬೇಕಾದ ಎಲ್ಲಾ ಬೆಂಬಲವನ್ನು ನೀಡುತ್ತಿದೆ” ಎಂದು ಯೇಸುವಾದಿಯಾನ್ ಹೇಳಿಕೊಂಡಿದ್ದಾರೆ.
ಯೇಸುವಾದಿಯಾನ್ ಪುದುಕೊಟ್ಟೈನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಚೆನ್ನೈನಲ್ಲಿ ತಮ್ಮ ಕಾನೂನು ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಅವರ ತಂದೆ ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಮುರಪ್ಪನಾಡು ಗ್ರಾಮಾಡಳಿತ ಅಧಿಕಾರಿಯಾಗಿದ್ದರು. ಅಕ್ರಮ ಮರಳು ಮಾಫಿಯಾವನ್ನು ತಡೆಯಲು ಯತ್ನಿಸಿದಾಗ ದುಷ್ಕರ್ಮಿಗಳ ದಾಳಿಗೆ ಮೃತಪಟ್ಟರು ಎಂದು ತಿಳಿದುಬಂದಿದೆ. ಮೂವರು ಆರೋಪಿಗಳಿಗೆ ಸೆಪ್ಟೆಂಬರ್ 2023ರಲ್ಲಿ ತುತ್ತುಕುಡಿ ತತ್ವ ನ್ಯಾಯಾಲಯವು ಈ ಮೂವರು ಆರೋಪಿಗಳಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು ಎಂದು ವರದಿ ತಿಳಿಸಿದೆ.