ನ್ಯೂಸ್ ನಾಟೌಟ್ : ಬೆಂಗಳೂರು-ಮಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ರೈಲಿನಿಂದ ಮಹಿಳೆಯೊಬ್ಬರು ನೇತ್ರಾವತಿ ನದಿಗೆ ಹಾರಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಳಿ ಫೆ.15ರಂದು ವರದಿಯಾಗಿದೆ.
ಆಕೆಯನ್ನು ನಯನಾ ಎಂ.ಜಿ (27 ) ಎಂದು ಗುರುತಿಸಲಾಗಿದ್ದು, ತುಮಕೂರಿನ ಮಧುಗಿರಿ ನಿವಾಸಿ ನಯನಾ ಎಂ.ಜಿ ಬೆಂಗಳೂರಿನಿಂದ ಮಂಗಳೂರಿಗೆ ಹೊರಟ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಯಾವುದೋ ವಿಚಾರಕ್ಕೆ ಮನನೊಂದಿದ್ದ ನಯನಾ ಬಂಟ್ವಾಳ ಸಮೀಪ ಹಾದು ಹೋಗುವ ನೇತ್ರಾವತಿ ಸೇತುವೆ ಬರುತ್ತಿದ್ದಂತೆ ಚಲಿಸುತ್ತಿದ್ದ ರೈಲಿನಿಂದ ನೇರವಾಗಿ ನೇತ್ರಾವತಿ ನದಿಗೆ ಹಾರಿದ್ದಾರೆ.
ಕೂಡಲೇ ಸಹಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನೆ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ನಗರ ಪೊಲೀಸರು ನೇತ್ರಾವತಿ ನದಿಯಲ್ಲಿ ರೈಲಿನಿಂದ ಜಿಗಿದ ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ.
ಗಂಟೆಗಳ ಕಾರ್ಯಾಚರಣೆ ಬಳಿಕ ಮುಳುಗುತಜ್ಞ ಮಹಮ್ಮದ್ ತಂಡ ನದಿಯಿಂದ ನಯನಾ ಎಂ.ಜಿ ಅವರ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ಈವರೆಗೂ ತಿಳಿದು ಬಂದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ.