ನ್ಯೂಸ್ ನಾಟೌಟ್: ಸುಳ್ಳು ಎಫ್ಐಆರ್ ದಾಖಲು ಮಾಡಿರುವ ಪಿಎಸ್ಐ ಅಮಾನತ್ತು ಮಾಡುವಂತೆ ಆಗ್ರಹಿಸಿ ಪೊಲೀಸರ ವಿರುದ್ಧ ವಕೀಲರ ಪ್ರತಿಭಟನೆ ನಡೆಯುತ್ತಿದ್ದು, ಕೋರ್ಟ್ ಆವರಣದಿಂದ ಡಿಸಿ ಕಚೇರಿವರೆಗೆ ನಡೆಯಲಿದೆ.
40 ವಕೀಲರ ಮೇಲೆ ರಾಮನಗರದ ಐಜೂರು ಠಾಣೆಯಲ್ಲಿ ಎಫ್ಐಆರ್ ದಾಖಲು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಪಿಎಸ್ಐ ತನ್ವೀರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ.ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಆದರ್ಶ್ ಅಗರ್ವಾಲ್, ಬೆಂಗಳೂರು ಪರಿಷತ್ ಅಧ್ಯಕ್ಷ ವಿಶಾಲ್ ರಘು ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಗುತ್ತಿದ್ದು, ಸಾವಿರಾರು ವಕೀಲರು ಭಾಗಿಯಾಗಿದ್ದಾರೆ,ಪ್ರತಿಭಟನೆ ಸಂಬಂಧ ಹೈ ಅಲರ್ಟ್ ಆಗಿರುವ ಜಿಲ್ಲಾ ಪೊಲೀಸರು, ಅಹಿತಕರ ಘಟನೆ ನಡೆಯದಂತೆ 900 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ಭದ್ರತಾ ಕಾರ್ಯಕ್ಕೆ ಓರ್ವ ಎಸ್ಪಿ, ಇಬ್ಬರು ಎಎಸ್ಪಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಮೂರು ಮಂದಿ ಡಿವೈಎಸ್ಪಿ, 13 ಮಂದಿ ಸಿಪಿಐ, 45 ಪಿಎಸ್ಐ, 60 ಎಎಸ್ಐ, 700 ಮಂದಿ ಪೊಲೀಸ್ ಪೇದೆಗಳನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ ಮೂರು ತುಕಡಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಎರಡು ತುಕಡಿ ಕೆಎಸ್ಆರ್ ಪಿ ಪಡೆ ನಿಯೋಜನೆ ಮಾಡಲಾಗಿದೆ. ಚಲನ ವಲನಗಳ ಕಣ್ಗಾವಲಿನ ಉದ್ದೇಶಕ್ಕೆ 40 ಹ್ಯಾಂಡಿಕ್ಯಾಮ್, 2 ಡ್ರೋಣ್, 100 ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.