ನ್ಯೂಸ್ ನಾಟೌಟ್: ನಮ್ ಕಡೆ ಒಂದು ಮಾತಿದೆ. ಮನೆ ಗಲಾಟೆ ಬೀದಿಗೆ ಬರಬಾರದು ಅಂತ. ಬೀದಿಗೆ ಬಂದ್ರೆ ಜನರ ದೃಷ್ಟಿ ಹಾಗೂ ಅಭಿಪ್ರಾಯದಲ್ಲಿ ವಿವಿಧ ಬಣ್ಣಗಳನ್ನು ಪಡೆದುಕೊಳ್ಳುತ್ತದೆ. ಒಂದೊಂದೇ ಮಣಿಗಳನ್ನು ಪೋಣಿಸಿದರೆ ಅದೊಂದು ಸರವಾಗಿ ಹೇಗೆ ಬದಲಾಗುತ್ತದೋ ಹಾಗೆಯೇ ವಿಚಾರವೂ ಬೆಳೆದುಕೊಂಡು ವಿವಾದಕ್ಕೆ ಕಾರಣವಾಗುತ್ತದೆ. ಅನಾವಶ್ಯಕ ಚರ್ಚೆಗೂ ಕಾರಣವಾಗಿ ವಾತಾವರಣವನ್ನೇ ಹಾಳು ಮಾಡಿ ಬಿಡಬಹುದು. ಸದ್ಯ ಸುಳ್ಯದ ಬಿಜೆಪಿಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಅನ್ನೋದಷ್ಟು ನಿಜ.
ವೆಂಕಟ್ ವಳಲಂಬೆಯನ್ನು ಸುಳ್ಯ ಬಿಜೆಪಿ ಮಂಡಲ ಸಮಿತಿಗೆ ಹೊಸ ಅಧ್ಯಕ್ಷರಾಗಿ ನೇಮಿಸಿರುವ ಬೆನ್ನಲ್ಲೇ ಸುಳ್ಯದ ಕಮಲ ಪಾಳಯದಲ್ಲಿ ಭಿನ್ನಮತದ ಬಿರುಗಾಳಿ ಎದ್ದಿದೆ. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರ ನ್ಯಾಯ ಪಂಚಾಯಿತಿಯತ್ತ ಮುಖ ಮಾಡಿರುವ ಈ ಒಂದು ವಿಚಾರ ಮುಂದೆ ಯಾವ ಕಡೆ ತಿರುಗುತ್ತದೋ ಗೊತ್ತಿಲ್ಲ. ಸುಳ್ಯದ ಬಿಜೆಪಿಯೊಳಗೆ ಬಣಗಳಿವೆ ಅನ್ನುವಂತಹ ಮಾತುಗಳನ್ನ ಈ ಹಿಂದೆ ಕೇಳಿದ್ದೆವು. ಆದರೆ ಅದಕ್ಕೆ ಸರಿಯಾಗಿ ಸಾಕ್ಷಿ ಸಿಕ್ಕಿರಲಿಲ್ಲ. ಆದರೆ ಮಂಡಲ ಸಮಿತಿಗೆ ಅಧ್ಯಕ್ಷರ ನೇಮಕವಾದ ಬೆನ್ನಲ್ಲೇ ಸುಳ್ಯದ ಬಿಜೆಪಿಯೊಳಗೆ ಮನೆಯೊಂದು ಎರಡು ಬಾಗಿಲು ಅನ್ನುವಂತಹದ್ದು ಸ್ಪಷ್ಟವಾಗಿದೆ.
ದಿವಂಗತ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿಯಂತಹ ದಿಗ್ಗಜರು ಕಟ್ಟಿ ಬೆಳೆಸಿದ ರಾಷ್ಟ್ರೀಯ ಪಕ್ಷ ಬಿಜೆಪಿ. ಪಕ್ಷದೊಳಗೆ ನಡೆದಿರುವ ವಿಚಾರ ಚರ್ಚೆ ಅನಾವಶ್ಯಕವಾಗಿ ಹೊರಗೆ ಹೋಗಲೇಬಾರದು ಅನ್ನುವ ನಿಯಮವನ್ನು ಹಿರಿಯರು ರೂಪಿಸಿದ್ದಾರೆ. ಪಕ್ಷದೊಳಗೆ ಏನೇ ಅಸಮಾಧಾನವಿದ್ದರೂ ಮಾತುಕತೆಯ ಮೂಲಕವೇ ಬಗೆಹರಿಸಬೇಕು ಅನ್ನುವ ನಿಯಮವಿದೆ. ತತ್ವ ಸಿದ್ಧಾಂತಗಳ ಮೇಲೆ ನಿಂತಿರುವ ಪಕ್ಷದಲ್ಲಿ ಶಿಸ್ತಿಗೆ ಮೊದಲ ಆದ್ಯತೆ. ಆದರೆ ಸುಳ್ಯದ ಬಿಜೆಪಿಯಲ್ಲಿ ಅದಾಗಲಿಲ್ಲ, ಅಸಮಾಧಾನ ಅನ್ನೋದು ಇಲ್ಲಿ ಒಂದು ಹಂತ ಮೀರಿ ಬೆಳೆಯಿತು. ಮುಂದುವರಿದು ಪಕ್ಷದ ಕಚೇರಿಯ ಬಾಗಿಲಿಗೆ ಬೀಗ ಜಡಿಯುವ ತನಕ ಹೋಯಿತು. ಇದು ವಿಪರ್ಯಾಸವೇ ಸರಿ. ಭವಿಷ್ಯದ ಯುವ ಕಾರ್ಯಕರ್ತರಿಗೆ ಇದರಿಂದ ಯಾವ ಸಂದೇಶ ತಲುಪಿದಂತಾಯಿತು..? ಮುಖ್ಯವಾಗಿ ಬಿಜೆಪಿ ರಾಷ್ಟ್ರೀಯ ಪಕ್ಷ. ಇದು ಯಾರ ಆಸ್ತಿಯೂ ಅಲ್ಲ. ಹೀಗಿರುವಾಗ ಪಕ್ಷದ ಕಚೇರಿಗೆ ಬೀಗ ಜಡಿಯುವ ಹಕ್ಕು ಯಾರಿಗೂ ಇಲ್ಲ. ಏನೇ ಆದರೂ ಅದನ್ನು ಮಾತುಕತೆಯ ಮೂಲಕವೇ ಬಗೆ ಹರಿಸಿಕೊಳ್ಳಬೇಕು ಎಂದು ಪಕ್ಷದ ಹಿರಿಯ ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.
ಪಕ್ಷ ತತ್ವ ಸಿದ್ಧಾಂತಗಳಿಗಿಂತ ಯಾರೂ ದೊಡ್ಡವರಿಲ್ಲ. ಇದು ವಾಸ್ತವ ಕೂಡ, ಕೆಲವರ ಸ್ವಾರ್ಥಕ್ಕೆ ಪಕ್ಷ ಬಲಿಯಾದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಮಗ್ಗಲ ಮುಳ್ಳಾಗಬಹುದು. ಇಂತಹ ಸಂಕಷ್ಟ ಸುಳ್ಯದಲ್ಲಿ ಬಿಜೆಪಿಗೆ ಮಾತ್ರವಲ್ಲ. ಈ ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ನಾಯಕರು ಕೂಡ ಒಳಗೊಳಗೆ ಆಂತರಿಕ ಕಚ್ಚಾಟ ನಡೆಸಿ ನೆಗೆಟಿವ್ ಸುದ್ದಿಗಳಿಂದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ನಮ್ಮ ಬದುಕಿನಲ್ಲಿ ಎಲ್ಲ ಸಮಯದಲ್ಲೂ ನಮ್ಮ ತಪ್ಪುಗಳಿಂದ ನಮಗೆ ಪಾಠ ಕಲಿಯಲು ದೇವರು ಅವಕಾಶ ನೀಡುವುದು ಕಡಿಮೆ. ಹಾಗಾಗಿ ಇನ್ನೊಬ್ಬರೆಸಗುವ ತಪ್ಪನ್ನು ನೋಡಿ ಅದರಿಂದಲೂ ನಾವು ಪಾಠ ಕಲಿಯಬೇಕಾಗುತ್ತದೆ. ಈ ಸೂತ್ರವನ್ನು ಕಮಲ ಪಾಳಯದವರು ಪಾಲಿಸಿದರೆ ಬಿಜೆಪಿಗೆ ಒಳ್ಳೆಯದು. ಇಲ್ಲ ಏನಾಗುವುದಿಲ್ಲ ಎಂದು ಮುಂದುವರಿದದ್ದೇ ಆದರೆ ಮುಂದಿನ ದಿನಗಳಲ್ಲಿ ಮತದಾರರೇ ಸೂಕ್ತ ಉತ್ತರವನ್ನು ನೀಡಬಹುದು.