ನ್ಯೂಸ್ ನಾಟೌಟ್ : ಮನೆಯ ಅಂಗಳದ ಬದಿ ಇದ್ದ ಅಶೋಕ ಮರ ಉಳಿಸಲು ಮುಂದಾದ ವೃದ್ಧ ದಂಪತಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಅಡ್ಡ ಹೊಳೆ ಎಂಬಲ್ಲಿ ನಡೆದಿದೆ.
ಅಂಗಳದ ಬದಿಯಲ್ಲಿರುವ 25 ವರ್ಷ ಹಳೆಯ ಅಶೋಕ ಮರ ತೆಗೆಯಬೇಕೆಂದು ಸ್ಥಳೀಯರು ತಗಾದೆ ತೆಗೆದಿದ್ದು, ಹಲ್ಲೆ ನಡೆಸಿ ಮರ ಕಡಿದುರುಳಿಸಿದ ಘಟನೆ ನಡೆದಿದೆ.
ದೂರು ನೀಡಿದರೆ ದಲಿತರ ಮೂಲಕ ರೇಪ್ ಕೇಸ್ ಹಾಕಿಸುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ವೃದ್ಧ ದಂಪತಿಯ ಮನೆಯಂಗಳದಲ್ಲಿ 40 ವರ್ಷಗಳಿಂದಿದ್ದ ಅಶೋಕ ಮರ ಇತ್ತು ಎನ್ನಲಾಗಿದೆ. ಮರ ತೆರವು ಮಾಡಬೇಕೆಂದು ಗಲಾಟೆ ಮಾಡಿದ್ದ ತಂಡದ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.
ಅಡ್ಡಹೊಳೆ ಎಂಬಲ್ಲಿ ವಾಸವಾಗಿರುವ ರಾಜು ಎಂಬುವವರ ಮೇಲೆ ಹಲ್ಲೆ ನಡೆದಿದೆ ಎಂದು ಗುರುತಿಸಲಾಗಿದೆ. ಈ ಬಗ್ಗೆ ಸ್ಥಳೀಯ ಪಂಚಾಯತ್ ಮತ್ತು ಅರಣ್ಯ ಇಲಾಖೆಗೆ ಈ ಹಿಂದೆ ದೂರು ನೀಡಲಾಗಿತ್ತು ಆದರೆ, ಮರ ತೆರವು ಮಾಡಬಾರದೆಂದು ಅರಣ್ಯ ಮತ್ತು ಪಂಚಾಯತ್ ಆದೇಶ ಮಾಡಿತ್ತು ಎಂದು ವರದಿ ತಿಳಿಸಿದೆ.ನಿನ್ನೆ(ಜ.೮) ರಾತ್ರಿ ವೇಳೆಗೆ ಮದ್ಯದ ಅಮಲಿನಲ್ಲಿ ಬಂದ ತಂಡದಿಂದ ವೃದ್ಧ ದಂಪತಿಗಳ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದ್ದು, ಹಲ್ಲೆ ನಡೆಸಿ ಮರದ ಕಟ್ಟೆ ಒಡೆದು ಬಲತ್ಕಾರವಾಗಿ ಮರ ಕಡಿದುರುಳಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಮಗೆ ಏನೂ ಮಾಡಲು ಆಗಲ್ಲ.ಆದರೂ ಸಿಬ್ಬಂದಿಗಳನ್ನು ಕಳುಹಿಸಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.