ನ್ಯೂಸ್ ನಾಟೌಟ್: ಮುಸ್ಲಿಂ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ಸಹೋದರಿ ಮತ್ತು ತಾಯಿಯನ್ನೇ ಯುವಕ ಕೊಂದಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ಮರೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಹಿರಿಕ್ಯಾತನಹಳ್ಳಿ ನಿವಾಸಿ 19 ವರ್ಷದ ಧನುಶ್ರೀ ಮತ್ತು ಆಕೆಯ ತಾಯಿ 40 ವರ್ಷದ ಅನಿತಾ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿ ಸಹೋದರ ನಿತಿನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಹೇಳಿದ ಪ್ರಕಾರ, ನಿತಿನ್ ತನ್ನ ಸಹೋದರಿ ಧನುಶ್ರೀ ಮುಸ್ಲಿಂ ಹುಡುಗನನ್ನು ಪ್ರೀತಿಸುತ್ತಿದ್ದರಿಂದ ತೀವ್ರವಾಗಿ ಅಸಮಾಧಾನಗೊಂಡಿದ್ದನು. ಈ ವಿಚಾರವಾಗಿ ಆಕೆಯೊಂದಿಗೆ ಹಲವು ಬಾರಿ ಜಗಳವಾಡಿದ್ದು, ಪ್ರತಿ ಬಾರಿ ಪೋಷಕರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸುತ್ತಿದ್ದರು. ಪೋಷಕರು ಸಹ ಯುವತಿಗೆ ಮುಸ್ಲಿಂ ಹುಡುಗನೊಂದಿಗಿನ ಪ್ರೀತಿ-ಪ್ರೇಮ ಮುಂದುವರಿಸಬೇಡ ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ.
ಆದರೆ ಮಂಗಳವಾರ(ಜ.೨೩) ಸಂಜೆ ಆರೋಪಿ ನಿತಿನ್ ಸಮೀಪದ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡುವ ನೆಪದಲ್ಲಿ ಧನುಶ್ರೀ ಮತ್ತು ತಾಯಿ ಅನಿತಾ ರನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದ. ಮರೂರು ಕೆರೆಯ ಬಳಿ ಬೈಕ್ ನಿಲ್ಲಿಸಿದ ನಿತಿನ್ ಸಹೋದರಿ ಧನುಶ್ರೀಯನ್ನು ಕೆರೆಗೆ ತಳ್ಳಿದ್ದಾನೆ. ಇದನ್ನು ತಡೆಯಲು ಬಂದ ತಾಯಿ ಅನಿತಾಳನ್ನು ಆರೋಪಿ ಕೆರೆಗೆ ತಳ್ಳಿದ್ದಾನೆ ಎನ್ನಲಾಗಿದೆ. ಆದರೆ ಸ್ವಲ್ಪ ಸಮಯದ ನಂತರ, ಆರೋಪಿ ತನ್ನ ತಾಯಿಯನ್ನು ರಕ್ಷಿಸಲು ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲಾಗಲೇ ತಾಯಿ ಕೊನೆಯುಸಿರೆಳೆದಿದ್ದರು.
ಒದ್ದೆ ಬಟ್ಟೆಯಲ್ಲೇ ಮನೆಗೆ ಬಂದ ನಿತಿನ್ ತಂದೆ ಮುಂದೆ ನಿರಂತರವಾಗಿ ಕಣ್ಣೀರು ಹಾಕಿದ್ದಾನೆ. ಈ ವೇಳೆ ಏನಾಯಿತು ಎಂದು ತಂದೆ ಸತೀಶ್ ವಿಚಾಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಏಳು ತಿಂಗಳಿಂದ ನಿತಿನ್ ತನ್ನ ತಂಗಿಯೊಂದಿಗೆ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಆರೊಪಿಯನ್ನು ಸೆರೆ ಹಿಡಿದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.