ನ್ಯೂಸ್ ನಾಟೌಟ್ : ನಟ ಪ್ರಕಾಶ್ ರಾಜ್ ಅವರು ಮುಂಬರುವ ಲೋಕಸಭೆ ಚುನಾವಣೆ ಕುರಿತಂತೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ‘ಮೂರು ರಾಜಕೀಯ ಪಕ್ಷಗಳು’ ತಮ್ಮ ಅಭ್ಯರ್ಥಿಯಾಗಲು ನನ್ನ ಹಿಂದೆ ನಿಂತಿವೆ, ಆದರೆ ಅವರ ಸಿದ್ಧಾಂತಕ್ಕಾಗಿ ಅಲ್ಲ, ನಾನು ಪ್ರಧಾನಿ ನರೇಂದ್ರ ಮೋದಿಯ ಟೀಕಾಕಾರನಾಗಿದ್ದೇನೆ ಎಂದು” ಎನ್ನುವ ನಟ ಪ್ರಕಾಶ್ ರಾಜ್ ಹೇಳಿಕೆ ಭಾರಿ ವೈರಲ್ ಆಗಿದೆ.
ಲೋಕಸಭೆ ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳಿಂದ ಚುನಾವಣಾ ಸಮೀಕರಣ ಶುರುವಾಗಿದೆ. ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿವೆ.ಈ ಹಿನ್ನಲೆಯಲ್ಲಿ ದೊಡ್ಡ ಮುಖಗಳ ಹುಡುಕಾಟದಲ್ಲಿ ನಿರತವಾಗಿವೆ. ಚಿತ್ರನಟ ಪ್ರಕಾಶ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಗಾಗ ಬಹಿರಂಗವಾಗಿ ಮಾತನಾಡುವುದರಲ್ಲಿ ಭಾರಿ ಹೆಸರುವಾಸಿಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಲವು ರಾಜಕೀಯ ಪಕ್ಷಗಳು ಸಂಪರ್ಕದಲ್ಲಿವೆ ಎಂದು ದೊಡ್ಡ ಹೇಳಿಕೆ ನೀಡಿದ್ದಾರೆ.
ಕೋಝಿಕ್ಕೋಡ್ನಲ್ಲಿ ನಡೆದ ಕೇರಳ ಲಿಟರೇಚರ್ ಫೆಸ್ಟಿವಲ್ನಲ್ಲಿ (ಕೆಎಲ್ಎಫ್) ಪ್ರಕಾಶ್ ರಾಜ್, ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನಾಗಿ ಮಾಡಲು ‘ಮೂರು ರಾಜಕೀಯ ಪಕ್ಷಗಳು’ ನನ್ನ ಹಿಂದೆ ಬಿದ್ದಿವೆ. ಆದರೆ ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ಟೀಕಾಕಾರರೇ ಹೊರತು ಅವರ ಸಿದ್ಧಾಂತದಿಂದಲ್ಲ. ನಾನು ಈ ಬಲೆಯಲ್ಲಿ ಸಿಲುಕಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ನಾನು ಅವರ ಬಲೆಗೆ ಬೀಳಲು ಬಯಸದ ಕಾರಣ ನನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದೇನೆ. ಅವರು ಜನರಿಗಾಗಿ ಮತ್ತು ನನ್ನ ಸಿದ್ಧಾಂತಕ್ಕಾಗಿ ಬರುತ್ತಿಲ್ಲ, ಏಕೆಂದರೆ ನೀವು ಕೇಂದ್ರದ ಬಿಜೆಪಿ ಸರ್ಕಾರದ ತೀವ್ರ ಟೀಕಾಕಾರರು ಮತ್ತು ನೀವು ಉತ್ತಮ ಅಭ್ಯರ್ಥಿಯಾಗಿದ್ದೀರಿ ಎಂದು ಅವರು ಹೇಳುತ್ತಾರೆ.
“ಈ ದೇಶದಲ್ಲಿ ಈಗ ಅಭ್ಯರ್ಥಿಗಳೂ ಇಲ್ಲ. ಯಾವುದೇ ಕ್ಷೇತ್ರಕ್ಕೆ ಪ್ರತಿನಿಧಿಗಳನ್ನು ಹುಡುಕಲು ರಾಜಕೀಯ ಪಕ್ಷಗಳು ನಿರಂತರವಾಗಿ ಹರಸಾಹಸ ಪಡಬೇಕಾಗುತ್ತದೆ. ನಾವು ಎಷ್ಟು ಅಸಹಾಯಕರಾಗಿದ್ದೇವೆ? ” ಎಂದು ಹೇಳಿದ್ದಾರೆ.ನಟ ಕಳೆದ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.