ನ್ಯೂಸ್ ನಾಟೌಟ್ : ಮಧ್ಯರಾತ್ರಿ ದೆಹಲಿಯ ಕಲ್ಕಾಜಿ ಮಂದಿರದಲ್ಲಿ ನಡೆದ ಮಾತಾ ಜಾಗರಣ ಸಮಾರಂಭದಲ್ಲಿ ಕಬ್ಬಿಣ ಮತ್ತು ಮರದಿಂದ ಮಾಡಿದ ವೇದಿಕೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ (ಜ.೨೭) ರಂದು ನಡೆದಿದೆ.
ಈ ಘಟನೆಯಲ್ಲಿ17 ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಪೊಲೀಸರ ಪ್ರಕಾರ, ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿಲ್ಲ, ಆದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸುಮಾರು 1500-1600 ಜನರು ಕಾರ್ಯಕ್ರಮದಲ್ಲಿ ಸೇರಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಘಟಕರ ವಿರುದ್ಧ ಐಪಿಸಿ ಸೆಕ್ಷನ್ 337, 304A ಮತ್ತು 188 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮುಖ್ಯ ವೇದಿಕೆಯ ಬಳಿ ಸಂಘಟಕರು ಮತ್ತು ವಿಐಪಿಗಳ ಕುಟುಂಬಗಳು ಕುಳಿತುಕೊಳ್ಳಲು ಒಂದು ಎತ್ತರದ ವೇದಿಕೆಯನ್ನು ನಿರ್ಮಿಸಲಾಗಿತ್ತು. ಮಧ್ಯರಾತ್ರಿ 12.30ರ ಸುಮಾರಿಗೆ ಈ ವೇದಿಕೆಯ ಮೇಲೆ ಕುಳಿತ ಮತ್ತು ನಿಂತ ಜನರ ಭಾರವನ್ನು ತಾಳಲಾರದೆ ಎತ್ತರದ ವೇದಿಕೆ ಕೆಳಕ್ಕೆ ಬಿತ್ತು. ಇದರಿಂದ ವೇದಿಕೆಯ ಕೆಳಗೆ ಕುಳಿತಿದ್ದ ಕೆಲವರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.