ನ್ಯೂಸ್ ನಾಟೌಟ್ : 500 ವರ್ಷಗಳ ನಿರಂತರ ಹೋರಾಟದ ಫಲವಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಈ ಸಂಭ್ರಮಕ್ಕೆ ದೇಶದ ಮೂಲೆ ಮೂಲೆಗಳಿಂದಲೂ ದಿಗ್ಗಜರು ಆಗಮಿಸಿದ್ದು,ಕಾರ್ಯಕ್ರಮಕ್ಕೆ ಮೆರುಗು ನೀಡಿದರು.ಅಸಂಖ್ಯಾತ ರಾಮ ಭಕ್ತರು ಈ ವೈಭವವನ್ನು ನೋಡಿ ಕಣ್ತುಂಬಿಕೊಂಡರು.
ಆದರೆ ಗದಗ ಜಿಲ್ಲೆಯ ಕಿಡಿಗೇಡಿಯೊಬ್ಬ ರಾಮ ಮಂದಿರದ ಮೇಲೆ ಮುಸ್ಲಿಂ ಧ್ವಜಗಳನ್ನು ಹಾರಿಸುವಂತಹ ನಕಲಿ ಫೋಟೋವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದ ಬೆನ್ನಲ್ಲಿಯೇ ಪೊಲೀಸರು ಮುಸ್ಲಿಂ ಯುವಕನನ್ನು ಬಂಧಿಸಿದ್ದಾರೆ.
ಹೌದು, ರಾಮ ಮಂದಿರ ಉದ್ಘಾಟನೆಯು ಜಗತ್ತಿನ 100 ಕೋಟಿಗೂ ಅಧಿಕ ಹಿಂದೂಗಳು ಸಂಭ್ರಮಿಸುವಂತಹ ಆಚರಣೆಯಾಗಿದೆ. ಆದರೆ, ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಚಿತ್ರವನ್ನು ಮುಸ್ಲಿಂ ಯುವಕನೊಬ್ಬ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.ಕೂಡಲೇ ಇಂತಹ ಪೋಸ್ಟ್ ಗಮನಿಸಿದ ಹಿಂದೂಪರ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದರು. ಹೀಗೆ ರಾಮ ಮಂದಿರ ಫೋಟೋ ತಿರುಚಿ ಫೇಸ್ ಬುಕ್ ಪೋಸ್ಟ್ ಮಾಡಿದ ಕಿಡಿಗೇಡಿಯನ್ನು ಗದಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸರು ತಾಜುದ್ದೀನ್ ದಫೆದಾರ್ ಎಂಬ ಯುವಕನ ವಶಕ್ಕೆ ಪಡೆದಿದ್ದಾರೆ. ಯುವಕನನ್ನ ವಶಕ್ಕೆ ಪಡೆದು ಪೋಸ್ಟ್ ಡಿಲೀಟ್ ಮಾಡಿಸಿದ್ದಾರೆ. ರಾಮ ಮಂದಿರ ಫೋಟೋವನ್ನು ತಿರುಚಿದ ಪೋಸ್ಟ್ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾತಲಾಣದಲ್ಲಿ ವೈರಲ್ ಆಗುತ್ತಿದೆ. ಯುವಕನ ವಿರುದ್ಧ ಕಾನೂನು ಕ್ರಮಕ್ಕೆ ಹಿಂದೂಪರ ಸಂಘಟನೆ ಪಟ್ಟು ಹಿಡಿದಿವೆ. ಈ ಬಗ್ಗೆ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸ್ ಇಲಾಖೆ ಭರವಸೆಯನ್ನು ನೀಡಿದೆ.