ನ್ಯೂಸ್ ನಾಟೌಟ್ : ಪೊಲೀಸ್, ಆಂಬ್ಯುಲೆನ್ಸ್, ಅಗ್ನಿಶಾಸಮಕ ಸೇರಿದಂತೆ ಇನ್ನಿತರ ಯಾವುದೇ ತುರ್ತು ಸೇವೆ ಪಡೆಯಲು 112 ನಂಬರ್ ಡಯಲ್ ಮಾಡಿದರೆ ಸಾಕು ಸಂಬಂಧಿತ ಸಿಬ್ಬಂದಿ ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸುವ ವಿಶೇಷ ವ್ಯವಸ್ಥೆ ಇವೆ. ಹಲವರು ಇದನ್ನು ಸದುಪಯೋಗ ಪಡಿಸಿಕೊಂಡರೆ, ಕೆಲವರು ದುರುಪಯೋಗ ಪಡಿಸಿಕೊಳ್ಳುವವರೂ ಇದ್ದಾರೆ.
ಆದರೆ ಈಗ ತುರ್ತುಸೇವೆ 112ಗೆ ಬರುತ್ತಿರುವ ಕರೆಗಳು ಪೊಲೀಸರಿಗೆ ಕಿರಿ-ಕಿರಿ ತಂದಿದೆ. ಸಣ್ಣ-ಪುಟ್ಟ ವಿಚಾರಕ್ಕೂ ಜನ ತುರ್ತು ಸೇವೆ ನಂಬರ್ಗೆ ಕರೆ ಮಾಡುತ್ತಿದ್ದಾರೆ. ಸದ್ಯ ಮಕ್ಕಳ ಕೆಲ ಕರೆಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿವೆ.
ಅಮ್ಮ ಮಗಳು ಜಗಳ ಮಾಡಿಕೊಂಡಿದ್ದು ಅಮ್ಮನ ವಿರುದ್ಧವೇ ಪೊಲೀಸರಿಗೆ ಕರೆ ಮಾಡಿ ಪುಟ್ಟ ಬಾಲಕಿ ದೂರು ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾಹಿತಿ ಕೇಳಲು ಕರೆ ಮಾಡಿದ್ದ ಪೊಲೀಸರಿಗೆ ತಾಯಿ ಬಾಯಿಗೆ ಬಂದಂತೆ ಬೈದು ಫೋನ್ ಇಟ್ಟಿದ್ದಾರೆ ಎನ್ನಲಾಗಿದೆ.
ಇನ್ನೊಂದು ಕೇಸ್ ನಲ್ಲಿ ಕ್ರಿಕೆಟ್ ಆಡಲು ಸೇರಿಸಿಕೊಂಡಿಲ್ಲ ಎಂದು ಬಾಲಕ ಕರೆ ಮಾಡಿದ್ದಾನೆ, ವಿಚಾರ ಸಣ್ಣದೆನಿಸಿದರೂ ಪೊಲೀಸರು ಸ್ಥಳಕ್ಕೆ ತೆರಳಿ ದೂರು ಸ್ವೀಕರಿಸಿ ಆತನ ಗೆಳೆಯರಿಗೆ ಬುದ್ದಿ ಹೇಳಿ ಆಟಕ್ಕೆ ಸೇರಿಸಿ ಬಂದರು. ಈ ಘಟನೆಯ ಆಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಬೆಂಕಿ ಅವ* ಘಡ, ಅನಾರೋಗ್ಯ, ಕಾನೂನು ಸುವ್ಯವಸ್ಥೆ, ಮಹಿಳಾ, ಮಕ್ಕಳ, ಹಿರಿಯ ನಾಗರಿಕರ ಹಾಗೂ ಇನ್ನಿತರ ಯಾವುದೇ ತುರ್ತು ಸಮಸ್ಯೆಗಳಿದ್ದರೂ ತಕ್ಷಣದ ನೆರವಿಗಾಗಿ ಸರ್ಕಾರ ತುರ್ತು ಸೇವೆ 112 ನಂಬರ್ ನೀಡಿದೆ. ಆದರೆ ಪುಟ್ಟ ಪುಟ್ಟ ಮಕ್ಕಳು ತಮ್ಮ ಚಿಕ್ಕ ಚಿಕ್ಕ ಸಮಸ್ಯೆಗಳಿಗೂ ತುರ್ತು ಸೇವೆ ನಂಬರ್ಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿರುವುದೇ ಸಮಸ್ಯೆಯಾಗಿದೆ ಎನ್ನುವಂತೆ ಇಲಾಖೆ ಸಿಬ್ಬಂದಿ ಇದರಿಂದ ಹೈರಾಣಾಗಿದ್ದಾರೆ, ಈ ಬಗ್ಗೆ ಬೆಂಗಳೂರು ಸೇರಿದಂತೆ ಎಲ್ಲಾ ಕಡೆಯೂ ಪೋಷಕರು ಗಮನಹರಿಸುವಂತೆ ಮನವಿ ಮಾಡಲಾಗಿದೆ.