ನ್ಯೂಸ್ ನಾಟೌಟ್: 6,077 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನ ಪ್ರಕರಣಕ್ಕೆ ತುರುವು ದೊರೆತಿದ್ದು, ದೂರುದಾರ ಅಧಿಕಾರಿಯೇ ಇದೀಗ ಆರೋಪಿ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ನವೆಂಬರ್ 22 ರಂದು ಯಾದಗಿರಿ (Yadagiri) ಜಿಲ್ಲೆಯ ಶಹಾಪುರದ ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 2 ಕೋಟಿ 66 ಲಕ್ಷ ರೂ. ಮೌಲ್ಯದ ಬರೋಬ್ಬರಿ 6,077 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನವಾಗಿತ್ತು.
ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿಯ ಆಹಾರ ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಭೀಮರಾಯ ಮಸಾಲಿ ದೂರನ್ನೂ ನೀಡಿದ್ದ. ಆದರೆ ಇದೀಗ ದೂರು ನೀಡಿದ್ದ ಉಪನಿರ್ದೇಶಕ ಭೀಮರಾಯ ಮಸಾಲಿಯೂ ಅಕ್ಕಿ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ತನಿಖೆಯಲ್ಲಿ ಗೊತ್ತಾಗಿದ್ದು, ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಕಳ್ಳತನ ಆಗುತ್ತಿದ್ದ ಅಕ್ಕಿ ಮಾರಾಟದಿಂದ ಬರುವ ಆದಾಯದಲ್ಲಿ ಬಂಧಿತ ಆರೋಪಿಗಳು ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕನಿಗೂ ಭರ್ಜರಿ ಪಾಲು ಕೊಡುತ್ತಿದ್ದರು ಎಮದು ಗೊತ್ತಾಗಿದೆ. ಹಾಲಿ ಇರುವ ಭೀಮರಾಯ ಮಸಾಲಿ ಹಾಗೂ ಈ ಹಿಂದಿನ ಡಿಡಿ ಪ್ರಭು ದೊರೆಗೆ ಪ್ರತಿ ತಿಂಗಳು 50 ಸಾವಿರ ರೂ. ಮಾಮೂಲಿ ತಲುಪುತ್ತಿತ್ತು ಎನ್ನಲಾಗಿದೆ. ಡಿಡಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಮಲ್ಲೇಶ ಮೂಲಕ ಹಣ ಕೊಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದಂಧೆಗೆ ಸಹಕಾರ ನೀಡಿದ್ದಕ್ಕೆ ಫುಡ್ ಇನ್ಸ್ಪೆಕ್ಟರ್ಗಳಿಗೆ ಪ್ರತಿ ತಿಂಗಳು 20 ಸಾವಿರ ರೂ. ಕೊಟ್ಟರೆ ಇತ್ತ ಶಿರಸ್ತೆದಾರರಿಗೆ ಪ್ರತಿ ತಿಂಗಳು 10 ಸಾವಿರ ರೂ.ಯನ್ನು ಫೋನ್ ಪೇ ಮೂಲಕ ನೀಡಲಾಗುತ್ತಿತ್ತು ಎಂದು ಮಾಧ್ಯಮ ವರದಿ ಮಾಡಿದೆ.