ನ್ಯೂಸ್ ನಾಟೌಟ್: ಸತ್ತವರು ಮತ್ತೆ ಬದುಕಿ ಬರಲೆಂದು ಮೃತಪಟ್ಟ ಕೆಲವೇ ಗಂಟೆಗಳ ಒಳಗೆ ಶವವನ್ನು ಉಪ್ಪಿನೊಳಗೆ ಹೂತಿಡುವುದು ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗುತ್ತಿದೆ.
ಜತೆಗೆ ಅಲ್ಲಿ ಹಾಗಾಯಿತಂತೆ ಇಲ್ಲಿ ಹೀಗಾಯಿತಂತೆ ಎಂಬ ನಿದರ್ಶನಗಳನ್ನು ಕೂಡ ಆ ಸಂದೇಶಗಳಲ್ಲಿ ಕೊಡಲಾಗಿದೆ. ಇದನ್ನು ನಿಜವೆಂದು ನಂಬಿದ ಪೋಷಕರು ನೀರಿನಲ್ಲಿ ಬಿದ್ದು ಮೃತಪಟ್ಟ ಇಬ್ಬರು ಮಕ್ಕಳ ಶವವನ್ನು ಉಪ್ಪಿನಲ್ಲಿ ಹೂತಿಟ್ಟು ಕಾದು ಕುಳಿತ ಘಟನೆಯೊಂದು ಹಾವೇರಿ ಜಿಲ್ಲೆಯಲ್ಲಿ ವರದಿಯಾಗಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಘಾಲಪೂಜೆ ಗ್ರಾಮದಲ್ಲಿ ನಾಗರಾಜ ಲಂಕೇರ (11) ಮತ್ತು ಹೇಮಂತ ಹರಿಜನ (12) ಎಂಬ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಭಾನುವಾರ ಸಂಜೆ ಒಟ್ಟಿಗೆ ಇವರಿಬ್ಬರು ನೀರಿನ ಹೊಂಡಕ್ಕೆ ಈಜಲು ತೆರಳಿದ್ದರು. ಆದರೆ ನೀರಿನಿಂದ ಹೊರಬರಲು ಆಗದೆ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ರಾತ್ರಿಯಾದರೂ ಬಾಲಕರಿಬ್ಬರು ಮನೆಗೆ ಬಾರದೆ ಇದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ನೀರಿನ ಹೊಂಡದ ಬಳಿ ಬಾಲಕರ ಚಪ್ಪಲಿ, ಬಟ್ಟೆಗಳೆಲ್ಲವೂ ಪತ್ತೆಯಾಗಿದೆ. ಹೀಗಾಗಿ ನೀರಿನ ಹೊಂಡದಲ್ಲಿ ಇಳಿದು ಹುಡಕಾಟ ನಡೆಸಿದಾಗ ಬಾಲಕರ ಮೃತದೇಹಗಳು ಪತ್ತೆಯಾಗಿದೆ ಎನ್ನಲಾಗಿದೆ.
ಈ ನಡುವೆ ಯಾರೋ ಒಂದು ಹಳೆಯ ವಿಡಿಯೊವನ್ನು ನೆನಪಿಸಿದ್ದಾರೆ. ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ತುಂಬ ಹೊತ್ತು ಉಪ್ಪಿನಲ್ಲಿ ಹೂತಿಟ್ಟರೆ ಅವರಲ್ಲಿ ಜೀವ ಸಂಚಾರ ಉಂಟಾಗುತ್ತದೆ ಎಂದು ಅದರಲ್ಲಿ ಹೇಳಲಾಗಿತ್ತು.
ಆಗ ಪೋಷಕರು ಮತ್ತು ಇತರರು ಈ ಪ್ರಯತ್ನವನ್ನು ನಂಬಿ, ನೋಡಿಯೇ ಬಿಡೋಣ ಎಂದು ಕ್ವಿಂಟಾಲ್ಗಟ್ಟಲೆ ಉಪ್ಪು ತರಿಸಿಕೊಂಡು ಅವರನ್ನು ಅದರಲ್ಲಿ ಹೂತಿಟ್ಟಿದ್ದಾರೆ. ಆದರೆ, ಸುಮಾರು ಆರು ಗಂಟೆಗಳ ಕಾಲ ಹಾಗೆ ಹೂತಿಟ್ಟರೂ ಮಕ್ಕಳು ಮತ್ತೆ ಬರಲಿಲ್ಲ. ಹೆತ್ತವರು ಆಗಾಗ ಹೋಗಿ ಉಸಿರಾಡುತ್ತಿದ್ದಾರಾ ಎಂದು ನೋಡಿ ಬರುತ್ತಿದ್ದರು. ಆದರೆ, ಯಾವ ಲಕ್ಷಣವೂ ಕಾಣಿಸಲಿಲ್ಲ.
ಆದರೆ, ತುಂಬಾ ಹೊತ್ತು ಇದೇ ರೀತಿ ಕಾಯುವುದು, ಅಳುವನ್ನು ನೋಡಲಾಗದೆ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಪೊಲೀಸರು ಬಂದು ಕುಟುಂಬಕ್ಕೆ ತಿಳಿ ಹೇಳಿದ್ದಾರೆ. ಒಮ್ಮೆ ಪ್ರಾಣ ಕಳೆದುಹೋದರೆ ಮತ್ತೆ ಬರುವುದಿಲ್ಲ. ನೀವು ಯಾವುದೇ ಸುಳ್ಳು ಮಾಹಿತಿಗಳನ್ನು ನಂಬಿ ಮಕ್ಕಳ ಅಂತ್ಯಕ್ರಿಯೆ ತಡ ಮಾಡಬೇಡಿ. ಮೃತದೇಹ ಇಟ್ಟುಕೊಂಡು ಈ ರೀತಿ ಮಾಡುವುದು ಸರಿಯಲ್ಲ ಎಂದು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಕೊನೆಗೆ ಎಲ್ಲ ಒತ್ತಾಯಕ್ಕೆ ಕಟ್ಟುಬಿದ್ದು ಹೆತ್ತವರು ಶವಗಳ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.