ನ್ಯೂಸ್ ನಾಟೌಟ್: ದುರಂತ ಅಂತ್ಯ ಕಂಡಿದ್ದ ಅರ್ಜುನನ 11ನೇ ದಿನದ ಕಾರ್ಯ ನಿರ್ವಹಿಸಿದ ಮಾವುತರು ಕಣ್ಣೀರು ಹಾಕಿದ್ದು, ಎಲ್ಲರೂ ಕುಟುಂಬಸ್ಥರ ಸಮೇತ ಕಾರ್ಯದಲ್ಲಿ ಇಂದು (ಡಿ.15) ಪಾಲ್ಗೊಂಡರು. (elephant arjuna)
ಇನ್ನೂ ತಡ ರಾತ್ರಿ ಅರ್ಜುನ ಸಮಾಧಿ ಸ್ಥಳಕ್ಕೆ ಕಾಡಾನೆ ಬಂದು, ಸುತ್ತಲೂ ಹಾಕಿದ್ದ ತಂತಿಬೇಲಿಯನ್ನು ದ್ವಂಸ ಮಾಡಿದೆ. ಕಂಬ ಹಾಗೂ ತಂತಿಯನ್ನು ತುಳಿದು ಹಾಕಿ, ಸಮಾಧಿಯ ಹತ್ತಿರಕ್ಕೂ ಬಂದು ಓಡಾಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸಾಕಾನೆ ಅರ್ಜುನ ಕೊನೆಯುಸಿರೆಳೆದಿದ್ದ. ಮಾವುತರು, ಕಾವಾಡಿಗರು, ಅರಣ್ಯ ಇಲಾಖೆ ಹಾಗೂ ಯಸಳೂರು ಸುತ್ತಮುತ್ತಲ ಗ್ರಾಮಸ್ಥರು 11ನೇ ದಿನದ ತಿಥಿ ಕಾರ್ಯವನ್ನು ನೆರವೇರಿಸಿದರು.
ಬೆಳಗ್ಗೆಯಿಂದಲೂ ಸಮಾಧಿ ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಬಂದು, ಪುರೋಹಿತರ ನೇತೃತ್ವದಲ್ಲಿ ಪೂಜೆಯನ್ನು ಮಾಡಿ ಎಡೆ ಇಟ್ಟರು. ಬಂದಿದ್ದ ಜನರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಶೀಘ್ರ ಸ್ಮಾರಕವನ್ನು ಮಾಡಬೇಕೆಂದು ಸ್ಥಳೀಯರು ಹಾಗೂ ಮಾವುತರು ಒತ್ತಾಯ ಮಾಡಿದರು. ಇದರ ಜತೆಗೆ ಅಂತ್ಯಸಂಸ್ಕಾರದ ಜಾಗವನ್ನು ರಕ್ಷಣೆ ಮಾಡಬೇಕು. ಇಲ್ಲಿಗೆ ಬರುವವರಿಗೆ ಸರಿಯಾದ ರಸ್ತೆಯನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದರು.