ನ್ಯೂಸ್ ನಾಟೌಟ್ : ಉಡುಪಿಯಲ್ಲಿ ನಡೆದಿದ್ದ ಕಗ್ಗೊಲೆಯ ತನಿಖೆ ಮತ್ತು ಆರೋಪಿಗಳ ಮೂಲಕ ಸ್ಥಳ ಮಹಜರಿಗೆ ಬಂದ ವೇಳೆ ಪೊಲೀಸರು ಮತ್ತು ಸ್ಥಳೀಯರ ನಡುವೆ ಘರ್ಷಣೆ ನಡೆದ ಘಟನೆ ಗುರುವಾರ ನ.16 ರಂದು ಸಂಜೆ ನಡೆದಿದೆ.
ತಾಯಿ ಮತ್ತು ಮೂರು ಮಕ್ಕಳ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿ ನೇಜಾರು ತೃಪ್ತಿ ಲೇಔಟ್ನಲ್ಲಿರುವ ಮನೆಗೆ ಮಹಜರು ಕಾರ್ಯ ನಡೆಸಲು ಕರೆ ತಂದ ಆರೋಪಿ ಪ್ರವೀಣ್ ಚೌಗುಲೆ ಮೇಲೆ ಆಕ್ರೋಶಿತ ಗುಂಪು ದಾಳಿ ನಡೆಸಲು ಯತ್ನಿಸಿದ್ದು, ಈ ವೇಳೆ ಪೊಲೀಸರು ನಡೆಸಿದ ಲಘು ಲಾಠಿ ಚಾರ್ಚ್ನಿಂದ ಕೆಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಬಂಧಿತ ಆರೋಪಿ ಪ್ರವೀಣ್ನನ್ನು ಪೊಲೀಸರು ಬಿಗಿ ಪೊಲೀಸ್ ಭದ್ರತೆ ಯಲ್ಲಿ ಮಹಜರು ಪ್ರಕ್ರಿಯೆ ನಡೆಸಲು ಸಂಜೆ 4.40ರ ಸುಮಾರಿಗೆ ಕೃತ್ಯ ಎಸಗಿದ ಮನೆಗೆ ಕರೆತಂದರು. ಅಲ್ಲಿ ಮನೆಯೊಳಗೆ ಕರೆದೊಯ್ದು 20 ನಿಮಿಷಗಳ ಕಾಲ ಮಹಜರು ಪ್ರಕ್ರಿಯೆ ನಡೆಸಿಸಲಾಯಿತು ಎಂದು ವರದಿ ತಿಳಿಸಿದೆ.
ಆರೋಪಿಯನ್ನು ಮನೆಗೆ ಕರೆ ತರುತ್ತಿರುವ ಮಾಹಿತಿ ತಿಳಿದು, ಪರಿಸರದಲ್ಲಿ ಬೆಳಗ್ಗೆಯಿಂದ ಜನ ಸೇರಿದ್ದರು. ಮಧ್ಯಾಹ್ನದ ಬಳಿಕ ಬಹಳಷ್ಟು ಮಂದಿ ಕಾದು ವಾಪಾಸ್ಸು ಹೋಗಿದ್ದರು. ಬಳಿಕ ಸಂಜೆ ಕರೆ ಆರೋಪಿಯನ್ನು ಕರೆ ತರುವ ವಿಚಾರ ತಿಳಿದು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
ಮನೆ ಎದುರು ನೆರೆದಿದ್ದ ಗುಂಪನ್ನು ಪೊಲೀಸರು ಹಿಂದಕ್ಕೆ ಕಳುಹಿಸಿ ಮುಖ್ಯ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ತಡೆದರು. ಈ ವೇಳೆ ಗುಂಪು, ಆರೋಪಿಯನ್ನು ತಮ್ಮ ಕೈಗೆ ಒಪ್ಪಿಸಿ ನಾವು ಆತನಿಗೆ ಶಿಕ್ಷೆ ಕೊಡುತ್ತೇವೆ. ಇಡೀ ಕುಟುಂಬವನ್ನು ಸರ್ವ ನಾಶ ಮಾಡಿದನಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೇಳೆ ಉಡುಪಿ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ, ಡಿವೈಎಸ್ಪಿ ಕೆ.ಪಿ.ದಿನಕರ್ ಹಾಗೂ ಪ್ರಕರಣದ ತನಿಖಾಧಿಕಾರಿ ಯಾಗಿರುವ ಮಲ್ಪೆ ವೃತ್ತ ನಿರೀಕ್ಷಕ ಮಂಜುನಾಥ್, ಮಲ್ಪೆ ಠಾಣಾಧಿಕಾರಿ ಗುರುನಾಥ್ ಹಾದಿಮನಿ ಮೊದಲಾದವರು ಹಾಜರಿದ್ದರು.
ಅತ್ತ ಮನೆಯೊಳಗೆ ಮಹಜರು ಪ್ರಕ್ರಿಯೆ ಮುಗಿಸಿ ಆರೋಪಿಯನ್ನು ವಾಪಾಸ್ಸು ಜೀಪಿಗೆ ಕರೆದುಕೊಂಡು ಹೋಗಲು ಪೊಲೀಸರು ಸಿದ್ಧರಾದರು. ಇತ್ತ ರಸ್ತೆ ಬದಿ ಇದ್ದ ಆಕ್ರೋಶಿತ ಗುಂಪು, ಬ್ಯಾರಿಕೇಡ್ ತಳ್ಳಿ ಒಳನುಗ್ಗಿತು.
ಈ ಸಂದರ್ಭ ಗುಂಪನ್ನು ನಿಯಂತ್ರಿಸಲು ಪೊಲೀಸರು ತಕ್ಷಣವೇ ಲಾಠಿ ಚಾರ್ಜ್ ಮಾಡಿದರು. ಅಲ್ಲಿಂದ ಗುಂಪು ಚದುರಿತು. ನಾಲ್ಕೈದು ಮಂದಿ ಲಾಠಿ ಚಾರ್ಚ್ನಿಂದ ಹಾಗೂ ಪೊಲೀಸ್ ಸಿಬ್ಬಂದಿಯೊಬ್ಬರು ಬಿದ್ದು ಗಾಯಗೊಂಡರು. ಬಳಿಕ ಆರೋಪಿ ಯನ್ನು ಸುರಕ್ಷಿತವಾಗಿ ಪೊಲೀಸರು ವಾಹನದಲ್ಲಿ ಅಲ್ಲಿಂದ ಕರೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ.