ನ್ಯೂಸ್ ನಾಟೌಟ್: ಬೇಲಿಯೇ ಎದ್ದು ಹೊಲ ಮೇಯುವುದು ಅಂದರೆ ಇದೇ ಅನ್ನೋ ಹಾಗಿದೆ, ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಬೆಳಗ್ಗೆ ವೇಳೆ ಪೊಲೀಸ್ ಡ್ಯೂಟಿ ಮಾಡುತ್ತಿದ್ದ ಈ ಪೊಲೀಸ್ ಪೇದೆ ರಾತ್ರಿಯಾಗುತ್ತಿದ್ದಂತೆ ಕಳ್ಳತನವನ್ನೇ ತನ್ನ ಡ್ಯೂಟಿ ಮಾಡಿಕೊಂಡಿದ್ದ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.
ಪೊಲೀಸಪ್ಪನೇ ಕಳ್ಳತನಕ್ಕೆ ಇಳಿಯೋದೂ ಅಲ್ಲದೆ; ಎಂಓಬಿ ಅಪರಾಧಿಯೊಬ್ಬನನ್ನು ಕೂಡ ಕಳ್ಳತನ ಮಾಡಲು ಜೊತೆಯಾಗಿ ಇಟ್ಟುಕೊಂಡಿದ್ದ ಈತನನ್ನು ಜೈಲಿಗೆ ಅಟ್ಟಲಾಗಿದೆ. ಚಿಕ್ಕಬಳ್ಳಾಪುರದ ರೈಲ್ವೆ ಹೊರ ಠಾಣೆ ಮುಖ್ಯಪೇದೆ ಸಿದ್ದರಾಮರೆಡ್ಡಿ ಎಂದು ಆರೋಪಿಯನ್ನು ಗುರುತಿಸಲಾಗಿದೆ.
ಸಾಬಣ್ಣ ಎಂಬ ಎಂ.ಓ.ಬಿ. ಅಪರಾಧಿಯೊಬ್ಬನನ್ನು ಕಳ್ಳತನ ಮಾಡಲು ಜೊತೆಯಾಗಿ ಇಟ್ಟುಕೊಂಡಿದ್ದ ಸಿದ್ದರಾಮರೆಡ್ಡಿ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಪ್ರಯಾಣಿಕರನ್ನೇ ಈತ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ನಗದು ಹಣ ಮತ್ತು ಚಿನ್ನಾಭರಣಗಳನನ್ನು ಕದಿಯುತ್ತಿದ್ದರು ಎಂದು ಬೆಳಕಿಗೆ ಬಂದಿದೆ. ಆರೋಪಿ ಸಿದ್ದರಾಮರೆಡ್ಡಿ ಬೇರೆ ಬೇರೆ ಅಂಗಡಿಗಳನ್ನು ತೊರಿಸುತ್ತಿದ್ದಾನೆ. ಇನ್ನು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರ ಜೊತೆ ಚಿನ್ನದಂಗಡಿ ವ್ಯಾಪಾರಸ್ಥರು ವಾಗ್ವಾದಕ್ಕಿಳಿದಿದ್ದಾರೆ.
ಮಧ್ಯರಾತ್ರಿಯಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರನ್ನು ಗುರಿಯಾಗಿರಿಸಿಕೊಳ್ಳುತ್ತಿದ್ದ ಇವರು, ದಂಡು ರೈಲು ನಿಲ್ದಾಣ ಬೈಯಪ್ಪನಹಳ್ಳಿ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ಬಂಧನದ ಬಳಿಕ ಆರೋಪಿ ಸಿದ್ದರಾಮರೆಡ್ಡಿಯನ್ನು ಇಲಾಖೆ ಸೇವೆಯಿಂದ ಅಮಾನತು ಮಾಡಿ, ಪೊಲೀಸರು ತನಿಖೆಗೆ ಆದೇಶಿಸಲಾಗಿದೆ.