ನ್ಯೂಸ್ ನಾಟೌಟ್ : ತಾನು ನಿತ್ಯ ಊಟ ಹಾಕುತ್ತಿದ್ದ ಬೀದಿ ನಾಯಿಗಳು ಕಣ್ಮರೆ ಆಗಿವೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
10 ವರ್ಷಗಳಿಂದ ತಾವು ಊಟ ಹಾಕುತ್ತಿದ್ದ ನಾಯಿಗಳನ್ನು ಮನೆ ಸಮೀಪದ ಕೆಲಸಗಾರನೊಬ್ಬ ಬೇರೆಡೆ ಬಿಟ್ಟು ಬಂದಿರುವುದಾಗಿ ಸಂಭವ ಪ್ರಕಾಶ್ ಎಮಬ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
ದೂರುದಾರರಾದ ಸಂಭವ ಪ್ರಕಾಶ್ ಶೇಷಾದ್ರಿಪುರಂ ವ್ಯಾಪ್ತಿಯ ಕುಮಾರ ಪಾರ್ಕ್ ಬಳಿಯ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಕಂಪನಿಯಿರುವ ಕಟ್ಟಡದ ಮೊದಲನೇ ಮಹಡಿಯಲ್ಲಿ ಅದರ ಮಾಲೀಕ ವೆಪಲವಿ ಮಹೇಂದ್ರರ ಎಂಬವರ ಮನೆಯಿದೆ. ಕಳೆದ 15 ವರ್ಷಗಳಿಂದ ಲಂಡನ್ನಲ್ಲಿ ನೆಲೆಸಿರುವ ಮಹೇಂದ್ರ, ಬೆಂಗಳೂರಿನ ತಮ್ಮ ಮನೆ ಬಳಿಯಿರುವ ಬೀದಿ ನಾಯಿಗಳಿಗೆ ನಿತ್ಯ ಊಟ ಹಾಕುವ ಜವಾಬ್ದಾರಿಯನ್ನ ಪ್ರಕಾಶ್ಗೆ ವಹಿಸಿದ್ದರು ಎನ್ನಲಾಗಿದೆ.
ವರ್ಷಕ್ಕೊಮ್ಮೆ ಬಂದಾಗ ತಾವೇ ಖುದ್ದು ನಾಯಿಗಳಿಗೆ ಊಟ ಹಾಕುವ ಅಭ್ಯಾಸ ರೂಢಿಸಿಕೊಂಡಿದ್ದರು. ಆದರೆ, ಅಕ್ಟೋಬರ್ 4ರ ನಂತರ ಮೂರೂ ನಾಯಿಗಳು ಕಣ್ಮರೆಯಾಗಿವೆ ಎಂದು ದೂರಲಾಗಿದೆ.
ನಗರದ ಹಲವೆಡೆ, ಅನಿಮಲ್ ಶೆಲ್ಟರ್ ಗಳಿರುವ ಕಡೆಗಳಲ್ಲಿ ನಾಯಿಗಳಿಗಾಗಿ ಹುಡುಕಾಟ ನಡೆಸಿರುವ ಪ್ರಕಾಶ್, ಕೆಲಸಗಾರನೊಬ್ಬ ನಾಯಿಗಳನ್ನ ಕರೆದೊಯ್ದು ಬೇರೆಡೆ ಬಿಟ್ಟಿದ್ದಾರೆ ಎಂದು ದೂರಿದ್ದಾರೆ ಎನ್ನಲಾಗಿದೆ.
ಈಗ ದೂರುದಾರ ಪ್ರಕಾಶ್ ಬಹಳ ದುಃಖಿತರಾಗಿದ್ದು, ಪೊಲೀಸರ ಬಳಿ ವಿಷಯ ಹೇಳಿಕೊಂಡಿದ್ದಾರೆ, ಅಲ್ಲದೇ ಒಂದು ನಾಯಿಯನ್ನು ಹುಡುಕಿ ತಂದು ಕೊಟ್ಟರೆ ತಲಾ 10 ಸಾವಿರ ರೂ. ಹಾಗೂ ಮೂರೂ ನಾಯಿಗಳನ್ನು ಹುಡುಕಿ ತಂದು ಕೊಟ್ಟವರಿಗೆ 35 ಸಾವಿರ ರೂ. ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ. ಮತ್ತೊಂದೆಡೆ ಸಂಭವ ಪ್ರಕಾಶ್ ನೀಡಿರುವ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡ ಶೇಷಾದ್ರಿಪುರಂ ಪೊಲೀಸರು, ಪ್ರಕರಣದ ಕುರಿತಂತೆ ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.